ನಾಡಿನೆಲ್ಲೆಡೆ ಇಂದಿನಿಂದ ನವರಾತ್ರಿ ಸಂಭ್ರಮ, ನವದುರ್ಗೆಯರನ್ನು ಪೂಜಿಸುವ ಪುಣ್ಯಕಾಲವಿದು, ಜಗನ್ಮಾತೆ ಆದಿಶಕ್ತಿಯು ಶ್ರೀ ಮಹಿಷಮರ್ದಿನಿಯಾಗಿ ನೆಲೆ ನಿಂತಿರುವ ಈ ಪುಣ್ಯ ಸ್ಥಳದ ಬಗ್ಗೆ ತಿಳಿಯೋಣ ಬನ್ನಿ..
ಕಲಿಯುಗದಲ್ಲಿ ದುರ್ಗಾ ಮತ್ತು ಗಣೇಶ ಬಹುಬೇಗನೆ ಭಕ್ತಿಗೆ ಒಲಿಯುವ ದೇವರಾಗಿದ್ದಾರೆ ಎಂಬುದು ಪುರಾಣದಲ್ಲಿ ತಿಳಿದುಬರುತ್ತದೆ. ಅಂತೆಯೇ ಶಕ್ತಿ ಕ್ಷೇತ್ರವಾದ ನೀಲಾವರ ಶ್ರೀ ಮಹಿಷಮರ್ದಿನಿ ಅಮ್ಮನವರ ದೇವಸ್ಥಾನವು ಇಂದು ಕಾರಣೀಕತೆಯನ್ನು ತೋರುತ್ತಿರುವ ಶಕ್ತಿ ಕೇಂದ್ರವಾಗಿದೆ.
ನೀಲಾವರವು ಉಡುಪಿ ಜಿಲ್ಲೆಯ ಬ್ರಹ್ಮಾವರದ ಬಳಿ ಉಡುಪಿಯಿಂದ 18 ಕಿ.ಮೀ ದೂರದಲ್ಲಿರುವ ಸುಂದರವಾದ ಸ್ಥಳವಾಗಿದೆ. ನೀಲಾವರ ದಕ್ಷಿಣದಲ್ಲಿ ಕುಂಜಾಲ್ ಗ್ರಾಮ ಮತ್ತು ಉತ್ತರದಲ್ಲಿ ಸೀತಾ ನದಿಯ ನಡುವೆ ಇದೆ. ಈ ಸ್ಥಳವು ದೇವಿ ಮಹಿಷಮರ್ದಿನಿ, ಗಣಪತಿ, ಸುಬ್ರಹ್ಮಣ್ಯ ಮತ್ತು ವೀರಭಬ್ರ ದೇವರನ್ನು ಪೂಜಿಸುವ ಭಕ್ತರಿಗೆ ಪವಿತ್ರ ಸ್ಥಳವಾಗಿದೆ.
ಕುಂಜಾಲ್ನಿಂದ ಉತ್ತರಕ್ಕೆ 3 ಕಿಮೀ ದೂರದಲ್ಲಿ, ಅಂದರೆ ನೀಲಾವರದಲ್ಲಿ ಮಹಿಷಮರ್ದಿನಿ ದೇವಾಲಯವನ್ನು ಕಾಣಬಹುದಾಗಿದೆ.
ನೀಲಾವರದಲ್ಲಿರುವ ಮಹಿಷ ಮರ್ಧಿನಿ ದೇವಸ್ಥಾನವು ಪುರಾತನವಾದ ದೇವಾಲಯವಾಗಿದೆ ಮತ್ತು ಸಾವಿರಾರು ಭಕ್ತರು ಈ ದೇವಾಲಯದಿಂದ ಧಾರ್ಮಿಕ ವಿಷಯಗಳ ಮೇಲೆ ಪ್ರಭಾವಿತರಾಗಿದ್ದಾರೆ.
ಇಲ್ಲಿ ಲಭ್ಯವಿರುವ ಶಿಲಾ ಶಾಸನಗಳು ದೇವಾಲಯದ ಪ್ರಾಚೀನತೆಯನ್ನು ತಿಳಿಸುತ್ತವೆ.
ಸ್ಥಳ ಪುರಾಣ : –
ನಾಗಲೋಕದ ಶ್ರೀ ಶಂಕಚೂಡನೆಂಬ ನಾಗರಾಜನಿಗೆ ವರಪ್ರಸಾದದಿಂದ ಜನಿಸಿದ ದೇವರತಿ, ನಾಗರತಿ, ಚಾರುರತಿ, ಮಂದರತಿ ಮತ್ತು ನೀಲರತಿ ಎಂಬ ಐದು ಜನ ಹೆಣ್ಣುಮಕ್ಕಳು ಮಹೇಶ್ವರನ ಮಗ ಸುಬ್ರಮಣ್ಯಸ್ವಾಮಿಯನ್ನು ವಿವಾಹವಾಗುವ ಹಂಬಲದಿಂದ, ಸುಬ್ರಮಣ್ಯಸ್ವಾಮಿಯನ್ನು ಕಾಣಲು ಕೈಲಾಸಕ್ಕೆ ತೆರಳಿ ಅಲ್ಲಿಯ ದ್ವಾರಪಾಲಕ ನಂದಿಯ ಶಾಪದಿಂದಾಗಿ ಸರ್ಪರೂಪದಲ್ಲಿ ಭೂಲೋಕ ಸಹ್ಯಾದ್ರಿಪರತ್ವದ ಕಾಡ್ಗಿಚ್ಚಿನಲ್ಲಿಸಿಕ್ಕು ಪರಿತಪಿಸುತ್ತಿದ್ದರು. ವ್ಯಾಘ್ರವಾದ ಮಹರ್ಷಿಗಳು ಸಹ್ಯಾದ್ರಿ ಪರತ್ವದ ಬಳಿ ಸಂಚರಿಸುವಾಗ ಅವರನ್ನು ನೋಡಿದ ನಾಗಕನ್ಯೆಯರು ಅವಸರವಾಗಿ ಓಡಾಡಿದಾಗ ಉಂಟಾದ ಭರಭರ ಶಬ್ದಕ್ಕೆ ಹೌಹಾರಿದ ಮಹರ್ಷಿಗಳಿಂದ, ಗತಿ ಕುಂಟಿತವಾಗಿ ಬಿದಿರು ಮಳೆಗೆ ಶೀಮಿತವಾಗಿರುವಂತಹ ಶಾಪಕ್ಕೆ ಆ ನಾಗಕನ್ಯೆಯರು ಗುರಿಯಾಗುತ್ತಾರೆ. ರಾಜಪುರುಷನೊಬ್ಬನಿಂದ ಶಾಪ ವಿಮೋಚನೆಯಾಗುವದೆಂದು ಮಹರ್ಷಿಗಳು ಹರಸಿದಂತೆ ಆವಂತಿಯ ರಾಜ ದೇವವರ್ಮನು ರಾಜ್ಯಬ್ರಷ್ಠನಾಗಿ ವೇಷ ಮರೆಸಿಕೊಂಡು ಸಹ್ಯಾದ್ರಿ ಪರ್ವತದಲ್ಲಿ ತಿರುಗಿದಾಗ ಕಾಡ್ಗಿಚ್ಚಿನಲ್ಲಿ ಬೆಂದು ಹೋಗುತ್ತಿರುವ ಐದು ಸರ್ಪಗಳನ್ನು ಉಳಿಸಿ ಅವುಗಳನ್ನು ಒಂದು ಬಟ್ಟೆಯಲ್ಲಿ ಸುತ್ತಿಕೊಂಡು ಪಶ್ಚಿಮಾಭಿಮುಖವಾಗಿ ಹೋಗುತ್ತಿರುವಾಗ ಆ ಸರ್ಪಗಳು ಒಂದೊಂದಾಗಿ ಹುತ್ತದಲ್ಲಿ ಸೇರಿದವು. ಅವುಗಳಲ್ಲಿ ನೀಲರತಿ ನಾಗ ಸರ್ಪವು ಸೇರಿದ ಜಾಗವೇ ನೀಲಾವರ ಕಾನನವೆಂಬ ಹೆಸರಾಯಿತು.
ಕಾಲಾನಂತರದಲ್ಲಿ ಆ ನಾಗ ಕನ್ಯೆಯರು ದೇವವರ್ಮ ರಾಜನಿಗೆ ಸ್ವಪ್ನದಲ್ಲಿ ಕಾಣಿಸಿಕೊಂಡು ತಿಳಿಸಿದಂತೆ ದೇವವರ್ಮ ರಾಜನು, ಹೆಮಾದ್ರಿಯ ರಾಜಾದಿತ್ಯನ ಏಕೈಕ ಪುತ್ರಿ ಜಲಜಾಕ್ಷಿಯನ್ನ ಪ್ರಾಣಾಪಾಯದಿಂದ ಬದುಕಿಸಿದ್ದಕ್ಕೆ ಆ ರಾಜನು ರಾಜ್ಯವನ್ನು ಹಾಗೂ ಮಗಳನ್ನು ದಾರೆಯೆರೆಯುತ್ತಾನೆ.
ಹೀಗೆ ಮುಂದೆ ಪಂಚಕನ್ಯೆಯರು ಪಂಚ ಸ್ಥಳದಲ್ಲಿ ನೆಲೆಸಿದರು. ಈ ನಾಗಕನ್ಯೆಯರು ನೆಲೆಸಿದ ಸ್ಥಳಗಳು ಪಂಚ ನಾಗಸ್ಥಳಗಳಾಗಿ ಮಾರ್ಪಟ್ಟವು. ಕೊನೆಯವಳಾದ ನೀಲರತಿಯು ನೆಲೆಸಿನಿಂದ ನೀಲಾವರದ ಪಂಚಮಿಕಾನು ಎಂಬ ಸ್ಥಳದಲ್ಲಿ ಬೃಹತ್ ಗಾತ್ರದ ಹುತ್ತಗಳು ಬೆಳೆದು ನಿಂದಿವೆ. ಅದೇ ರೀತಿಯಲ್ಲಿ ಅಲ್ಲಿ ಸರ್ವಮಂಗಳೆಯಾದ ದುರ್ಗಾದೇವಿಯು ನೆಲೆಸಿ ನಾಗಕನ್ನಿಕೆಯರ ಶಕ್ತಿಯನ್ನು ಇಮ್ಮಡಿಗೊಳಿಸುತ್ತಾಳೆ.
ನೀಲಾವರ ಪ್ರದೇಶವು ಸೀತಾ ನದಿಯ ದಡದಲ್ಲಿ ನೀರಿನಿಂದ ಆವೃತವಾಗಿದ್ದ ಕಾರಣ ‘ನೀರಾವರ ಎಂಬುದಾಗಿ’ ಮುಂದೆ ‘ನೀಲಾವರ’ ಎಂಬುದಾಗಿ ಬದಲಾವಣೆಯಾಯಿತು ಎಂದು ಅಭಿಪ್ರಾಯ ಪಡಲಾಗುತ್ತದೆ.
ಇಲ್ಲಿ ದೇವಿಯು ಮಹಿಷಮರ್ದಿನಿ ಎಂಬ ನಾಮದಿಂದ ಕರೆಯಲ್ಪಡುತ್ತಾಳೆ. ಅದೇ ರೀತಿಯಲ್ಲಿ ಮಹಿಷಮರ್ದಿನಿಯ ದೇವಾಲಯದಲ್ಲಿ ಪರಿವಾರ ಶಕ್ತಿಗಳಾದ ಶ್ರೀ ವೀರಭದ್ರ, ಕಲ್ಲುಕುಟ್ಟಿಗ ಹಾಗೂ ವಿನಾಯಕ ದೇವರು ನೆಲೆಸಿದ್ದಾರೆ.
ಶ್ರೀ ವೀರಭದ್ರ ದೇವರು ಬೆಳೆಯನ್ನು ರಕ್ಷಣೆ ಮಾಡುತ್ತಾ, ಕಲ್ಕುಡನು ಕಳ್ಳತನಕ್ಕೆ ಸಂಬಂಧಿಸಿದ ಕಾವಲಿನ ಕಾರ್ಯವನ್ನು ನಡೆಸುತ್ತಾರೆ. ಕಲ್ಕುಡನು ನೆಲೆಸಿದ ಸ್ಥಳವು ಮನೋಹರವಾದ ಚಿಕ್ಕ ಬೆಟ್ಟದಂತ ಪ್ರದೇಶವಾಗಿದೆ. ಇಲ್ಲಿ ಭಕ್ತಾಧಿಗಳು ತಮ್ಮ ಮನದ ಹರಿಕೆಯನ್ನು ಬೇಡಿಕೊಂಡು ಒಂದು ಕಲ್ಲನ್ನು ಹಾಕಿ ಹೋಗುತ್ತಾರೆ. ಆ ಸಂಪ್ರದಾಯ ಇಂದು ಬೆಳೆದು ಇಲ್ಲಿ ಕಲ್ಲಿನ ಗುಡ್ಡವೆ ನಿರ್ಮಾಣ ಆಗಿದೆ.
ಶ್ರೀ ಕ್ಷೇತ್ರದಲ್ಲಿ ವಿನಾಯಕ ದೇವರು ಪ್ರದಕ್ಷಿಣಾ ಪಥದ ಆಗ್ನೇಯದ ಮೂಲೆಯಲ್ಲಿ ನಿರ್ಮಾಣ ಮಾಡಲಾಗಿದೆ. ಹಾಗೂ ದೇವಾಲಯದ ಒಳಗಡೆ ಕೆಲವೊಂದು ಲಿಂಗಗಳು ಉದ್ಬವವಾಗಿದೆ. ಹಾಗೇ ಹೊರಗಿನ ಪ್ರದಕ್ಷಿಣಾ ಪಥದಲ್ಲಿ ಶ್ರೀ ವೀರಭದ್ರ ಹಾಗೂ ವ್ಯಾಘ್ರಚಾಮುಂಡಿ ಗುಡಿಗಳು ಇವೆ. ಕ್ಷೇತ್ರದ ಹೊರಗಿನ ಗುಡ್ಡದ ಮೇಲೆ ಕಲ್ಕುಡ ನೆಲೆಯಾಗಿದ್ದಾನೆ.
ಶ್ರೀ ದೇವಾಲಯದಲ್ಲಿನ ಮಹಿಷಮರ್ದಿನಿಯ ಚತುರ್ಬಾಹು ವಿಗ್ರಹದ ಮೂಲ ಮೂರ್ತಿ ರುದ್ರಾಕ್ಷಿಶಿಲೆಯಿಂದ ನಿರ್ಮಿಸಲಾಗಿದೆ ಎನ್ನಲಾಗುತ್ತಿದೆ. ಬಲಗೈಯಲ್ಲಿ ಚಕ್ರ, ಎಡಗೈಯಲ್ಲಿ ಶಂಖವನ್ನು ಹಿಡಿದಿರುವ ದೇವಿ ಇನ್ನೊಂದು ಎಡಗೈಯಲ್ಲಿ ಮಹಿಷಾಸುರನನ್ನು ಎತ್ತಿ ಹಿಡಿದು, ಅವನ ಕುತ್ತಿಗೆಗೆ ಬಲಗೈಯಲ್ಲಿರುವ ತ್ರಿಶೂಲದಿಂದ ತಿವಿಯುತ್ತಿರುವಂತೆ ಕೆತ್ತಲಾಗಿದೆ.
ದೇವಿಯು ಬಲಗಾಲಿನಿಂದ ಮಹಿಷಾಸುರನನ್ನು ಮೆಟ್ಟಿ ಹಿಡಿದ ನಿರ್ದೇಶನವಿದೆ. ಮೂರ್ತಿಯಲ್ಲಿನ ಕೆತ್ತನೆಯ ಕೆಲಸ ಬಹಳ ನಾಜೂಕಾಗಿದೆ.
ವಾರ್ಷಿಕ ರಥೋತ್ಸವ, ನವರಾತ್ರಿ ಉತ್ಸವ ಇಲ್ಲಿನ ಪ್ರಮುಖ ಪೂಜೆಗಳು. ದೇವಾಲಯಕ್ಕೆ ಹೊಂದಿಕೊಂಡಂತೆ ವೀರಭದ್ರ ಮತ್ತು ಕಲ್ಕುಡ ಇಲ್ಲಿನ ಪ್ರಮುಖ ದೈವಗಳು. ದೇವಸ್ಥಾನದ ಉತ್ತರಕ್ಕೆ ಗಾಲವ ತೀರ್ಥವಿದೆ. ರಥೋತ್ಸವ ಮತ್ತು ದೀಪೋತ್ಸವದ ಕಾಲದಲ್ಲಿ ಇಲ್ಲಿ ತೆಪ್ಪೋತ್ಸವ ಕೂಡ ಜರುಗುತ್ತದೆ.



