ನದಿ, ಕಾಡಿನ ಪ್ರದೇಶಗಳಿಂದ ಆವೃತವಾದ ಪ್ರಕೃತಿ ಸೌಂದರ್ಯದ ಮಡಿಲಿನಲ್ಲಿ ನೆಲೆ ನಿಂತ ಈ ದೇವರ ಗುಡಿಗೆ ಮಾಡೇ ಇಲ್ಲ. ಈ ಊರಿನಲ್ಲಿ ಮಕ್ಕಳನ್ನು ಮಲಗಿಸಲೆಂದು ತೊಟ್ಟಿಲು ಕಟ್ಟುವಂತೆಯೂ ಇಲ್ಲ. ಈ ಊರಿನಲ್ಲಿ ದೇವಿ ಮಹಾತ್ಮೆ ಯಕ್ಷಗಾನವೂ ನಡೆಯುವುದಿಲ್ಲ. ಇಂಥ ಹಲವು ವಿಶೇಷತೆಗಳನ್ನು ಒಳಗೊಂಡಿರುವ ಕ್ಷೇತ್ರವೇ ಹಾಲಾಡಿ ಸಮೀಪದ ಹೈಕಾಡಿಯಿಂದ 2 ಕಿ.ಮೀ. ದೂರದ ಹಿಲಿಯಾಣ ಗ್ರಾಮದಲ್ಲಿರುವ ಶ್ರೀ ನಾಗೇರ್ತಿ (ನಾಗರತಿ) ಅಮ್ಮನವರ ದೇವಸ್ಥಾನ.
ದಟ್ಟ ಅಡವಿಯೊಳಗಿರುವ ಉದ್ಭವ ಮೂರ್ತಿಯ ಈ ನಾಗೇರ್ತಿ ದೇವಿಯ ಗರ್ಭಗುಡಿಗೆ ಮಾಡಿಲ್ಲ. ಇದಕ್ಕೆ ನಿರ್ದಿಷ್ಟ ಐತಿಹ್ಯ ಕಂಡು ಬಾರದಿದ್ದರೂ, ಮಾಡು ಮಾಡಿದರೆ ಒಂದೇ ದಿನದಲ್ಲಿ ನಿರ್ಮಿಸಿ, ಅದಕ್ಕೆ ಪ್ರತಿಷ್ಠೆ, ಪೂಜೆ ಎಲ್ಲವೂ ಆ ದಿನವೇ ಆಗಬೇಕು ಅನ್ನುವ ಕಾರಣಕ್ಕೆ ಹಿಂದಿನಿಂದಲೂ ಮಾಡು ನಿರ್ಮಿಸಲು ಮುಂದಾಗಿಲ್ಲ.
ಕೆಲ ವರ್ಷಗಳ ಜೀರ್ಣೋದ್ಧಾರಕ್ಕೆ ಪ್ರಶ್ನೆ ಇಟ್ಟ ವೇಳೆಯೂ ಮಾಡು ಮಾಡುವಂತಿಲ್ಲ ಅನ್ನುವ ಅಭಿಪ್ರಾಯ ವ್ಯಕ್ತವಾಯಿತು. ಮಳೆ, ಬಿಸಿಲು, ಬೆಳದಿಂಗಳು ಉದ್ಭವ ದೇವಿ ಮೂರ್ತಿಯ ಮೇಲೆ ಸ್ಪರ್ಶವಾಗಬೇಕು ಅನ್ನುವ ನಂಬಿಕೆಯೂ ಇದೆ.
ಶ್ರೀ ದುರ್ಗಾಪರರ್ಮೇಶ್ವರಿ, ಶ್ರೀ ನಾಗದೇವರು, ಶ್ರೀ ವೀರಭದ್ರ ಸ್ವಾಮಿಗೂ ಆರಾಧನೆ ನಡೆಯುತ್ತದೆ. ಸುಮಾರು 100ಕ್ಕೂ ಮಿಕ್ಕಿ ನಾಗಶಿಲೆಗಳು ಇಲ್ಲಿವೆ.
ದೇಗುಲ ಸನಿಹವೇ ವಾರಾಹಿ ಉಪನದಿ ಹರಿಯುತ್ತಿದ್ದು, ಅಲ್ಲಿಂದ ಮಣ್ಣಿನ ಕೊಡದಲ್ಲೇ ನೀರು ತಂದು ಪೂಜೆ ನಡೆಸುವುದು ಈಗಲೂ ಮುಂದುವರಿಯುತ್ತಿರುವ ಸಂಪ್ರದಾಯ.
ಹಿಂದೆ ಕುಂಬಾರರು ಈ ಹಾದಿಯಲ್ಲಿ ಹೋಗುವಾಗ ಒಂದೊಂದು ಮಡಿಕೆ ಇಲ್ಲಿ ಇಟ್ಟು ಹೋಗುತ್ತಿದ್ದರಂತೆ. ಹಾಗಾಗಿ ಮಡಿಕೆಯಲ್ಲೇ ನೀರು ತರಲಾಗುತ್ತದೆ.
ತುಲಾಭಾರ ದೇವರಿಗೆ ಇಷ್ಟದ ಸೇವೆ. ಕುಂಭ, ಮೀನ, ಮೇಷ, ವೃಷಭ ಮಾಸದಲ್ಲಿ ನೀಲಕಂಠ ಅಡಿಗರು ಪೂಜೆ ನೆರವೇರಿಸಿದರೆ, ಮಿಥುನ, ಕರ್ಕಾಟಕ, ಸಿಂಹ, ಕನ್ಯಾ ತಿಂಗಳಲ್ಲಿ ರಾಮಕೃಷ್ಣ ಅಡಿಗರು, ತುಲಾ, ವೃಶ್ಚಿಕ, ಧನು, ಮಕರ ಮಾಸದಲ್ಲಿ 2 ಕುಟುಂಬಗಳು (ಗಿರೀಶ್ ಅಡಿಗರು, ಉಮೇಶ್ ಅಡಿಗರು, ಕಿರಾಡಿ ಕೆಳಾಬೈಲು ಗೋವಿಂದ ಭಟ್ಟರ ಮಕ್ಕಳು) ಪೂಜಾ ಕೈಂಕರ್ಯವನ್ನು ನಡೆಸಿಕೊಂಡು ಬರುತ್ತಿದ್ದಾರೆ.
ಪುರಾಣದ ಹಿನ್ನೆಲೆ
ಶಿವದತ್ತನೆಂಬ ಬ್ರಾಹ್ಮಣನು ತಪಸ್ಸಿಗಾಗಿ ಗೊಂಡಾರಣ್ಯವನ್ನು ಪ್ರವೇಶಿಸಿದಾಗ ಕಾಳ್ಗಿಚ್ಚಿನ ಬೆಂಕಿಯ ಜ್ವಾಲೆಯಿಂದ ಪರಿತಪಿಸುತ್ತಿದ್ದ ಐದು ಸರ್ಪಗಳನ್ನು ಕಂಡು, ಅವುಗಳನ್ನು ರಕ್ಷಿಸಲು ಮುಂದಾಗುತ್ತಾನೆ. ಹಿಡಿದುಕೊಂಡು ಊರಿಗೆ ಹೊರಟಾಗ ಅವುಗಳು ಒಂದೊಂದಾಗಿಯೇ ಕಾಡಿನಲ್ಲಿ ಶಿವದತ್ತನ ಕೈಯಿಂದ ತಪ್ಪಿಸಿಕೊಂಡು, ಮಾಯವಾಗುತ್ತವೆ. ಅವು ಮಾಯವಾದ ಸ್ಥಳಗಳಲ್ಲಿ ಶಿವದತ್ತನು ದುರ್ಗಾದೇವಿಯ ಆಲಯವನ್ನು, ಸನಿಹವೇ ಸುಬ್ರಹ್ಮಣ್ಯನನ್ನು ಪ್ರತಿಷ್ಠೆ ಮಾಡಿದನು ಎನ್ನುವ ಪ್ರತೀತಿಯಿದೆ.
ಅವುಗಳೇ ಈಗ ಪಂಚಕನ್ಯಾ ಕ್ಷೇತ್ರಗಳಾದ ಶೇಡಿಮನೆಯ ಅರಸಮ್ಮಕಾನು (ದೇವರತಿ), ಹಿಲಿಯಾಣದ ನಾಗೇರ್ತಿ (ನಾಗರತಿ), ಚೋರಾಡಿ ಸಮೀಪದ ಚಾರುರತಿ, ಮಂದಾರ್ತಿಯ ಮಂದಾರತಿ ಹಾಗೂ ನೀಲಾವರದ ನೀಲಾರತಿ ದೇವಿ ದೇವಸ್ಥಾನಗಳಾಗಿ ಪ್ರಸಿದ್ಧಿ ಪಡೆದಿವೆ.

