ಉಡುಪಿ : ಕಳೆದ ಎರಡು ವರ್ಷಗಳಲ್ಲಿ ಜಿಲ್ಲೆಯಲ್ಲಿ ಚಿರತೆ ದಾಳಿಯಿಂದ 122ಕ್ಕೂ ಅಧಿಕ ಜಾನುವಾರು ಪ್ರಾಣ ಕಳೆದುಕೊಂಡಿವೆ.
ಜಾನುವಾರುಗಳ ಮೇಲೆ ಚಿರತೆಗಳ ನಿರಂತರ ಆಕ್ರಮಣವು ರೈತರಲ್ಲಿ ಆತಂಕ ಸೃಷ್ಟಿಸಿದೆ ಮತ್ತು ಜಾನುವಾರುಗಳನ್ನು ಕಾಪಾಡಿಕೊಳ್ಳುವುದೇ ರೈತರಿಗೆ ಸವಾಲಾಗಿದೆ.
ಕಾಡುಪ್ರಾಣಿ ದಾಳಿಯಿಂದ ಮೃತ ಜಾನುವಾರುಗಳಿಗೆ ಅರಣ್ಯ ಇಲಾಖೆಯಿಂದ ನಿರ್ದಿಷ್ಟ ಮೊತ್ತದ ಪರಿಹಾರ ನೀಡಲಾಗುತ್ತದೆ. ಕಳೆದ ಎರಡು ವರ್ಷಗಳಲ್ಲಿ 19 ಲಕ್ಷ ರೂ. ಪರಿಹಾರ ರೈತರಿಗೆ ಒದಗಿಸಲಾಗಿದೆ.
ಹಲವು ಗ್ರಾಮಗಳಲ್ಲಿ ಚಿರತೆ ದಾಳಿ ಪ್ರಕರಣ ನಿತ್ಯವೂ ಸುದ್ದಿಯಾಗುತ್ತಿವೆ. ಕೃಷಿ ಭೂಮಿಗಳಿಗೆ, ಕೊಟ್ಟಿಗೆ ಬಂದು ಜಾನುವಾರುಗಳನ್ನು ಎಳೆದು ಕೊಂಡು ಹೋಗುವ ಚಿರತೆಗಳು ರೈತರ ಆದಾಯದ ಮೂಲಕ್ಕೆ ಸಮಸ್ಯೆ ತಂದೊಡ್ಡಿದೆ. ಕೆಲವು ಪ್ರದೇಶಗಳಲ್ಲಿ ಜನರು ತಮ್ಮ ಜಾನುವಾರುಗಳನ್ನು ಸಂರಕ್ಷಿಸಲು ರಾತ್ರಿ ಕಳೆಯುವಂತಹ ಸ್ಥಿತಿ ನಿರ್ಮಾಣವಾಗಿದೆ. ಚಿರತೆ ದಾಳಿಗಳನ್ನು ತಡೆಯಲು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.
ಸೆರೆ ಸಿಕ್ಕ ಚಿರತಗೆಳನ್ನು ಹಿಡಿದು ಬೇರೆಡೆ ಬಿಡುವ ಕಾರ್ಯಾಚರಣೆ ಅರಣ್ಯ ಇಲಾಖೆ ನಡೆಸುತ್ತಿದೆ. ರೈತರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.

