ಕೋಟ ಶ್ರೀನಿವಾಸ ಪೂಜಾರಿ ಅವರ ಅವಧಿಪೂರ್ವ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಉಪಚುನಾವಣೆ ನಡೆದಿದ್ದು, ಬಿಜೆಪಿ ಅಭ್ಯರ್ಥಿ ಕಿಶೋರ್ ಕುಮಾರ್ ಪುತ್ತೂರು ಅವರು ಜಯಗಳಿಸಿದ್ದಾರೆ.
ಕಿಶೋರ್ ಕುಮಾರ್ ಪುತ್ತೂರು 1,697 ಮತಗಳ ಅಂತರದಿಂದ ಜಯಗಳಿಸಿದ್ದಾರೆ.
ಕಿಶೋರ್ ಅವರು 3,655 ಮತ ಪಡೆದರೆ ಸಮೀಪದ ಕಾಂಗ್ರೆಸ್ ಅಭ್ಯರ್ಥಿ ರಾಜು ಪೂಜಾರಿ 1,958 ಮತ ಪಡೆದಿದ್ದಾರೆ. ಎಸ್ಡಿಪಿಐನ ಅನ್ವರ್ ಸಾದತ್ 195 ಮತ, ಪಕ್ಷೇತರ ಅಭ್ಯರ್ಥಿ ದಿನಕರ ಉಳ್ಳಾಲ್ 9 ಮತ ಗಳಿಸಿದರು.
ಒಟ್ಟು 87 ಮತಗಳು ತಿರಸ್ಕೃತಗೊಂಡವು. ಚಲಾವಣೆಯಾದ ಒಟ್ಟು 5,907 ಮತಗಳ ಪೈಕಿ 5,819 ಸಿಂಧು ಮತಗಳಿದ್ದವು.
ಎಂ.ಎ. ಸ್ನಾತಕೋತ್ತರ ಪದವೀಧರ ಕಿಶೋರ್, ವಿದ್ಯಾರ್ಥಿ ದೆಸೆಯಿಂದ ಸಂಘ ಪರಿವಾರದ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು. ವಿದ್ಯಾರ್ಥಿ ಜೀವನದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ನಲ್ಲಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ್ದರು.
ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾದ ದ.ಕ. ಜಿಲ್ಲಾಧ್ಯಕ್ಷ, ಯುವ ಮೋರ್ಚಾದ ಕರ್ನಾಟಕ ರಾಜ್ಯ ಉಪಾಧ್ಯಕ್ಷ, ಮೆಸ್ಕಾಂ ನಾಮನಿರ್ದೇಶಿತ ಸದಸ್ಯರಾಗಿದ್ದ ಅವರು ಬಿಜೆಪಿ ದ.ಕ.ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾಗಿಯೂ ಕರ್ತವ್ಯ ನಿರ್ವಹಿಸಿದ್ದಾರೆ. ಪ್ರಸ್ತುತ ದ.ಕ.ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

