ನಿನ್ನೆ ಬೆಳ್ಳಂಬೆಳಗ್ಗೆ ಉಡುಪಿ ಜಿಲ್ಲೆಯ ಕಬ್ಬಿನಾಲೆಯಲ್ಲಿ ನಕ್ಸಲ್ ಮುಖಂಡನಾದ ವಿಕ್ರಂ ಗೌಡನನ್ನು ಎನ್ಕೌಂಟರ್ ಮಾಡಲಾಗಿದೆ. ಉಳಿದ ನಾಲ್ವರು ನಕ್ಸಲರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.
ಕರಾವಳಿ ಮತ್ತು ಮಲೆನಾಡಿನಲ್ಲಿ ನಕ್ಸಲ್ ರ ಕರಾಳ ಇತಿಹಾಸವನ್ನು ಗಮನಿಸುವುದಾದರೆ,
2006 ರ ಆಗಸ್ಟ್ 23 ರಲ್ಲಿ ನಕ್ಸಲರು ಶೃಂಗೇರಿಯ ಕೆರೆಕಟ್ಟೆ ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದ ಕಚೇರಿಯ ಮೇಲೆ ನಕ್ಸಲರು ದಾಳಿ ನಡೆಸಿದ್ದರು ಮತ್ತು ಕೆಲದಿನದ ನಂತರ ಕಾರ್ಕಳದ ಮುನಿಯಾಲು ಮುಟ್ಲುಪಾಡಿಯಲ್ಲಿ ಸದಾನಂದ ಶೆಟ್ಟಿ ಅವರ ಬೈಕ್ಗೆ ಬೆಂಕಿ ಹಚ್ಚಿ ಬೆದರಿಸಿದ್ದರು.
2007 ರ ಜೂನ್ 3ರಲ್ಲಿ ನಕ್ಸಲರು ಶೃಂಗೇರಿಯ ಕಿಗ್ಗ ಸಮೀಪದ ಗುಂಡಘಟ್ಟದಲ್ಲಿ ನಕ್ಸಲರಿಂದ ಅಂಗಡಿ ಮಾಲೀಕರಾದ ವೆಂಕಟೇಶ ಹತ್ಯೆಗೆ ಒಳಗಾಗಿದ್ದರು. ಇದೇ ವರ್ಷ ಜೂನ್ 7 ರಂದು ಆಗುಂಬೆಯ ತಲ್ಲೂರಂಗಡಿ ಬಳಿದ್ದ ಕೆಎಸ್ಆರ್ಟಿಸಿ ಬಸ್ಗೆ ಬೆಂಕಿ ಹಚ್ಚಿದ್ದರು.
2008 ರ ಮೇ 15 ರಂದು ಹೆಬ್ರಿ ಸಮೀಪದ ಸೀತಾನದಿಯ ಬಳಿ ನಕ್ಸಲರ ಗುಂಡಿಗೆ ಶಿಕ್ಷಕರಾದ ಭೋಜ ಶೆಟ್ಟಿ ಮತ್ತು ಅವರ ಗೆಳೆಯರಾದ ಕೃಷಿಕ ಸುರೇಶ್ ಶೆಟ್ಟಿ ಬಲಿಯಾಗಿದ್ದರು.
2008 ರ ನವೆಂಬರ್ 20 ರಂದು ಹೊರನಾಡು ಸಮೀಪದ ಮಾವಿನಹೊಲ ಎಂಬಲ್ಲಿ ನಕ್ಸಲರಾದ ಸೊರಬದ ಮನೋಹರ್, ನವೀನ್, ಅಭಿಲಾಷ್ ಎನ್ಕೌಂಟರ್ ಸಂದರ್ಭ ಪೇದೆಯಾದ ಗುರುಪ್ರಸಾದ್ ಸಾವು ಸಂಭವಿಸಿತ್ತು.
2008 ರ ಡಿಸೆಂಬರ್ 7 ರಂದು ನಕ್ಸಲರು ಹಳ್ಳಿಹೊಳೆ ಸಮೀಪದ ಕೃಷಿಕ ಜಮೀನ್ದಾರನಾದ ಕೇಶವ ಯಡಿಯಾಳರನ್ನು ಪೊಲೀಸರ ಮಾಹಿತಿದಾರನೆಂಬ ಸಂಶಯದಲ್ಲಿ ಮನೆಗೆ ನುಗ್ಗಿ ಹತ್ಯೆಗೈದಿದ್ದರು.
2011 ರ ಅಗಸ್ಟ್ 9 ರಂದು ಬೆಳ್ತಂಗಡಿ ತಾಲೂಕಿನ ನಾವೂರ ಗ್ರಾಮದ ಮಂಜಲದಲ್ಲಿ ನಕ್ಸಲ್ ನಿಗ್ರಹದಳ ಪೊಲೀಸರ ಗನ್ ಮಿಸ್ ಫೈರ್ ಆಗಿ ಎಎನ್ಎಫ್ ಸಿಬ್ಬಂದಿಯಾದ ಮಹಾದೇವ ಮಾನೆ ಬಲಿಯಾಗಿದ್ದರು.
2011 ರ ಡಿಸೆಂಬರ್ 28 ರಂದು ತೆಂಗಿನಮಾರುವಿನಿಂದ ಸುಮಾರು ಎರಡು ಕಿ.ಮೀ. ದೂರದಲ್ಲಿರುವ ದಟ್ಟಾರಣ್ಯದಲ್ಲಿ ಸದಾಶಿವ ಗೌಡ ಎಂಬವರ ಶವವು, ಕೈಕಾಲು ಕಟ್ಟಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು ಇದರ ಸಮೀಪದಲ್ಲಿಯೆ ನಕ್ಸಲರ ಬರಹವೂ ದೊರಕಿತ್ತು.
ನಿನ್ನೆ, ನವೆಂಬರ್ 18 ರಂದು, 60 ಕ್ಕೂ ಅಧಿಕ ಪ್ರಕರಣಗಳ ಆರೋಪಿಯಾಗಿದ್ದ, ಕರ್ನಾಟಕ, ಕೇರಳ, ತಮಿಳುನಾಡು ಸಹಿತ ಮೂರು ರಾಜ್ಯಗಳಿಗೆ ಬೇಕಾದ ನಕ್ಸಲ್ ವಿಕ್ರಂ ಗೌಡನನ್ನು ಕಾರ್ಕಳ ತಾಲೂಕಿನ ಹೆಬ್ರಿಯ ಪೀತಬೈಲುವಿನಲ್ಲಿ ಎಎನ್ಎಫ್ ಕಾರ್ಯಚರಣೆಯಲ್ಲಿ ಎನ್ಕೌಂಟರ್ ಮಾಡಲಾಗಿದೆ. ಶರಣಾಗತಿಗೆ ಸೂಚನೆ ನೀಡಿದರೂ, ಎಎನ್ಎಫ್ ಸಿಬ್ಬಂದಿ ಮೇಲೆ ದಾಳಿಗೆ ತಯಾರಿ ನಡೆಸಿದರು. ಈ ವೇಳೆ ಎರಡು ಕಡೆಗಳಿಂದ ಗುಂಡಿನ ಚಕಮಕಿ ನಡೆದಿದ್ದು, ಇದರಲ್ಲಿ ನಕ್ಸಲ್ ನಾಯಕ ವಿಕ್ರಂ ಗೌಡ ಸಾವನ್ನಪ್ಪಿದ್ದಾನೆ.

