ಉಡುಪಿ: ಜಿಲ್ಲೆಯಲ್ಲಿ ಪ್ರಸ್ತುತ ಸಾಲಿ ನಲ್ಲಿ ಅತ್ಯಧಿಕ ಕಳ್ಳತನ ಪ್ರಕರಣಗಳು ವರದಿಯಾಗಿದ್ದು, ಬೆರಳೆಣಿಕೆ ಪ್ರಕರಣಗಳನ್ನಷ್ಟೇ ಪೊಲೀಸರು ಪತ್ತೆ ಹಚ್ಚಿದ್ದಾರೆ. ಕಳೆದ ಎರಡು ವರ್ಷಕ್ಕೆ ಹೋಲಿಸಿದರೆ ಈ ವರ್ಷ ಕಳವು ಪ್ರಕರಣಗಳ ಸಂಖ್ಯೆ ವಿಪರೀತವಾಗಿದೆ.
ಕೇವಲ 10 ತಿಂಗಳಲ್ಲೇ 228 ಪ್ರಕರಣಗಳು ದಾಖಲಾಗಿವೆ.
ನಗರ ಠಾಣಾ ವ್ಯಾಪ್ತಿಯ ಅನತಿ ದೂರದಲ್ಲಿ ಕಂದಾಯ ಇಲಾಖೆಯ ಸಿ ದರ್ಜೆ ನೌಕರರ ವಸತಿ ಸಮುಚ್ಚಯದ ಆರು ಮನೆಗಳಲ್ಲಿ ಸೆ.29ರ ತಡರಾತ್ರಿ ಸರಣಿ ಕಳ್ಳತನ ನಡೆದಿತ್ತು. ಒಂದು ಮನೆಯಲ್ಲಿ ಸುಮಾರು 120 ಗ್ರಾಂ ಚಿನ್ನ, 20 ಸಾವಿರ ರೂ. ನಗದು, ಮತ್ತೂಂದು ಮನೆಯಲ್ಲಿ 20 ಸಾವಿರ ರೂ. ನಗದನ್ನು ಕಳ್ಳರು ದೋಚಿ ಪರಾರಿಯಾಗಿದ್ದರು. ಘಟನೆ ನಡೆದು 2 ತಿಂಗಳಾಗುತ್ತಿದ್ದರೂ ಪೊಲೀಸರಿಗೆ ಕಳ್ಳರ ಬಗ್ಗೆ ಒಂದೇ ಒಂದು ಕುರುಹು ಕೂಡ ಲಭ್ಯವಾಗಿಲ್ಲ.
ಸಿಸಿಟಿವಿಯಲ್ಲಿಯೂ ಈ ಬಗ್ಗೆ ಯಾವುದೇ ಮಾಹಿತಿ ಪೊಲೀಸರಿಗೆ ಲಭಿಸಿಲ್ಲ ಎನ್ನಲಾಗಿದೆ.
ಸಂತೆಕಟ್ಟೆಯಲ್ಲಿ ಮನೆಯೊಂದಕ್ಕೆ ನುಗ್ಗಿದ ಚಡ್ಡಿ ಗ್ಯಾಂಗ್ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದರು. ಪೊಲೀಸರಿಗೆ ಈ ಪ್ರಕರಣವನ್ನೂ ಪತ್ತೆಹಚ್ಚಲು ಸಾಧ್ಯವಾಗಿಲ್ಲ. ಜು.31 ರಂದು ಬ್ರಹ್ಮಗಿರಿಯ ವಸತಿ ಸಮುಚ್ಚಯಗಳಿಗೆ ನಾಲ್ವರು ಮುಸುಕುಧಾರಿಗಳ ತಂಡವು ನುಗ್ಗಿ ಕಳ್ಳತನಕ್ಕೆ ವಿಫಲ ಯತ್ನ ನಡೆಸಿತ್ತು. ಫ್ಲ್ಯಾಟ್ ನ ಸಿಸಿಟಿವಿ ದೃಶ್ಯಾವಳಿಗಳಿಂದ ಕೃತ್ಯವು ಬೆಳಕಿಗೆ ಬಂದಿದ್ದರೂ ಕಳ್ಳರು ಪತ್ತೆಯಾಗಿಲ್ಲ.
ನವೆಂಬರ್ ಮೊದಲ ವಾರದವರೆಗೆ ಒಟ್ಟು 228 ಕಳವು ಪ್ರಕರಣಗಳು ನಡೆದಿವೆ. ಇದರಲ್ಲಿ 19 ಮನೆ ಕಳ್ಳತನ, 64 ರಾತ್ರಿ ವೇಳೆ ಕಳವು, 19 ಬೆಳಗ್ಗಿನ ವೇಳೆ ಕಳವು, 3 ಸರ ಕಳ್ಳತನ ಹಾಗೂ 9 ದರೋಡೆ ಪ್ರಕರಣಗಳು ಸೇರಿವೆ. ಕಳೆದ ವರ್ಷ 157 ಹಾಗೂ ಹಾಗೂ 2022ರಲ್ಲಿ 133 ಪ್ರಕರಣಗಳು ವರದಿಯಾಗಿತ್ತು.

