ವಿಶ್ವ ಹಿಂದೂ ಪರಿಷತ್ ನ ಕರ್ನಾಟಕ ಘಟಕವು ಬೆಂಗಳೂರಿನಲ್ಲಿ ಆಯೋಜಿಸಿದ್ದ ಸಂತ ಸಮಾವೇಶದಲ್ಲಿ, ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿಯವರು ‘ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾದವು ಎಂದು ಸಂಭ್ರಮಿಸುತ್ತೇವೆ. ಆದರೆ ನಾವು ನಿಜಕ್ಕೂ ಸ್ವತಂತ್ರವಾಗಿ ಇದ್ದೇವೆಯೇ’ ಎಂದು ಪ್ರಶ್ನಿಸಿದರು.
ಸ್ವಾತಂತ್ರ್ಯ ಪೂರ್ವದಲ್ಲಿ ಹಿಂದೂ ರಾಷ್ಟ್ರವಾಗಿದ್ದ ಭಾರತವು, ಸ್ವಾತಂತ್ರ್ಯ ನಂತರ ಜಾತ್ಯತೀತ ರಾಷ್ಟ್ರವಾಯಿತು. ಆದರೆ ಈಗ ನಮ್ಮನ್ನು ಗೌರವಿಸುವ ಸಂವಿಧಾನ ಬರಬೇಕು ಎಂದು ಆಗ್ರಹಿಸಿದರು.
ಹಿಂದುಗಳು, ನಾವೆಲ್ಲರೂ ಸುಭದ್ರವಾಗಿದ್ದೇವೆ ಎಂಬ ಭ್ರಮೆಯಲ್ಲಿದ್ದೇವೆ ಆದರೆ ಈ ದೇಶವನ್ನು ಕಬಳಿಸುವ ಕೆಲಸ ವ್ಯವಸ್ಥಿತವಾಗಿ ನಡೆಯುತ್ತಿದೆ, ಹಿಂದುಗಳನ್ನು ಬೇರೆ ಧರ್ಮಕ್ಕೆ ಸೆಳೆಯುವ ಕಾರ್ಯವು ನಡೆಯುತ್ತಿದೆ, ಈ ಬಗ್ಗೆ ಜಾಗೃತರಾಗಬೇಕು ಎಂದರು.
ಆಸೆ ಆಮಿಷಗಳಿಗೆ ಬಲಿಯಾಗಿ ಹಿಂದೂ ಧರ್ಮವನ್ನು ವಿಧ್ವಂಸ ಗೊಳಿಸುತ್ತೇವೆ ಎಂದು ಸಂಕಲ್ಪ ಮಾಡುವ ಪಕ್ಷಗಳನ್ನು ಅಧಿಕಾರಕ್ಕೆ ತರುತ್ತಿದ್ದೇವೆ, ಚುನಾವಣೆಯ ಸಂದರ್ಭದಲ್ಲಿ ನಾವು ಬೀದಿಗೆ ಇಳಿಯಬೇಕು ಎಂದು ಆಗ್ರಹಿಸಿದರು.
ಈ ಸಮಾವೇಶದಲ್ಲಿ ಉಡುಪಿಯ ಅದಮಾರು ಮಠದ ಈಶಪ್ರಿಯ ತೀರ್ಥ ಸ್ವಾಮೀಜಿ, ಪಂಚಮಸಾಲಿ ಪೀಠದ ವಚನಾನಂದ ಶ್ರೀ, ಬಳ್ಳಾರಿಯ ಕಲ್ಯಾಣ ಮಠದ ಕಲ್ಯಾಣ ಮಹಾ ಸ್ವಾಮೀಜಿ, ವಿಜಯಪುರದ ಜ್ಞಾನ ಯೋಗ ಯೋಗಾಶ್ರಮದ ಬಸವಲಿಂಗ ಸ್ವಾಮೀಜಿ, ಮಂಗಳೂರಿನ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಸೇರಿ ಸುಮಾರು 30ಕ್ಕೂ ಹೆಚ್ಚು ಸ್ವಾಮೀಜಿಗಳು ಸಮಾವೇಶದಲ್ಲಿ ಉಪಸ್ಥಿತರಿದ್ದರು.

