ಉಡುಪಿ: ಭಾರತೀಯ ಚುನಾವಣಾ ಆಯೋಗದ ಮೂಲಕ ಕರ್ನಾಟಕದಲ್ಲಿ ನಡೆದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ–2026 (ಎಸ್ಐಆರ್) ಪ್ರಕ್ರಿಯೆಯು ಮುಕ್ತಾಯಗೊಂಡು ಇಂದು ಅಂತಿಮ ಮತದಾರರ ಪಟ್ಟಿ ಪ್ರಕಟಗೊಂಡಿದೆ. ಪರಿಷ್ಕೃತ ಪಟ್ಟಿಯಂತೆ ಉಡುಪಿ ಜಿಲ್ಲೆಯಲ್ಲಿ ಪ್ರಸ್ತುತ ಒಟ್ಟು 10,14,143 ಮಂದಿ ಮತದಾರರಿದ್ದಾರೆ ಎಂದು ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ತಿಳಿಸಿದರು.
ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಜೂನ್ ತಿಂಗಳಿನಿಂದ ನಡೆದ ಎಸ್ಐಆರ್ ಪ್ರಕ್ರಿಯೆಯ ಸಂಪೂರ್ಣ ವಿವರಗಳನ್ನು ಹಂಚಿಕೊಂಡರು. ಈ ಪ್ರಕ್ರಿಯೆಯ ಬಳಿಕ ಜಿಲ್ಲೆಯ ಒಟ್ಟಾರೆ ಮತದಾರರಲ್ಲಿ 49,733 ಮಂದಿ ಕಡಿಮೆಯಾಗಿದ್ದಾರೆ ಎಂದು ಮಾಹಿತಿ ನೀಡಿದರು.
ಎಸ್ಐಆರ್ ಪ್ರಕ್ರಿಯೆಯ ಕೊನೆಯಲ್ಲಿ ರಾಜ್ಯದಲ್ಲೇ ಅತ್ಯಂತ ಕಡಿಮೆ ಮತದಾರರ ಇಳಿಕೆ ಕಂಡುಬಂದ ಜಿಲ್ಲೆಯಾಗಿ ಉಡುಪಿ ಮುಂಚೂಣಿಯಲ್ಲಿದೆ. ಇಲ್ಲಿ ಒಟ್ಟು ಮತದಾರರ ಪೈಕಿ ಶೇ. 4.67ರಷ್ಟು ಮಂದಿ ಮಾತ್ರ ಅನರ್ಹರಾಗಿದ್ದು, ಜಿಲ್ಲೆಯು ಕನಿಷ್ಠ ಇಳಿಕೆಯ ಮೂಲಕ ಅಗ್ರಸ್ಥಾನದಲ್ಲಿದೆ. ಇದೇ ವೇಳೆ ದಕ್ಷಿಣ ಕನ್ನಡ ಜಿಲ್ಲೆಯು ಶೇ. 6.95 ಇಳಿಕೆಯೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, ಉತ್ತರ ಕನ್ನಡ ಜಿಲ್ಲೆಯು ಶೇ. 7.35 ಇಳಿಕೆಯೊಂದಿಗೆ ಮೂರನೇ ಸ್ಥಾನದಲ್ಲಿದೆ. ಜೂನ್ 16ರಂದು ಎಸ್ಐಆರ್ ಆರಂಭಗೊಳ್ಳುವ ಮುನ್ನ ಉಡುಪಿ ಜಿಲ್ಲೆಯಲ್ಲಿ ಒಟ್ಟು 10,63,876 ಮತದಾರರಿದ್ದರು. ಪ್ರಕ್ರಿಯೆಯ ಬಳಿಕ ಪ್ರಕಟಗೊಂಡ ಅಂತಿಮ ಪಟ್ಟಿಯಲ್ಲಿ ಈ ಸಂಖ್ಯೆ 10,14,143ಕ್ಕೆ ಇಳಿಕೆಯಾಗಿದೆ. ಇದಕ್ಕೂ ಮುನ್ನ ಆಗಸ್ಟ್ 24ರಂದು ಪ್ರಕಟಗೊಂಡಿದ್ದ ಕರಡು ಮತದಾರರ ಪಟ್ಟಿಯಲ್ಲಿ 10,00,545 ಮಂದಿ ಸ್ಥಾನ ಪಡೆದಿದ್ದರು.

