ಉಡುಪಿ: ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಬೈಕಾಡಿಯಲ್ಲಿ ಮಂಗಳವಾರ (ಅಕ್ಟೋಬರ್ 27) ತಡರಾತ್ರಿ ರೌಡಿ ಶೀಟರ್ ಸುಜಿತ್ ಪಿಂಟೋ ಎಂಬಾತನನ್ನು ಕಬ್ಬಿಣದ ರಾಡ್ನಿಂದ ಹೊಡೆದು ಅತ್ಯಂತ ಬರ್ಬರವಾಗಿ ಕೊಲೆ ಮಾಡಲಾಗಿದೆ. ಮೂಲತಃ ಕಲ್ಯಾಣಪುರದವರಾದ ಸುಜಿತ್, ಪ್ರಸ್ತುತ ಬೈಕಾಡಿಯಲ್ಲಿ ನೆಲೆಸಿದ್ದರು. ಘಟನೆಗೆ ಸಂಬಂಧಿಸಿದಂತೆ ಆಟೋ ರಿಕ್ಷಾ ಚಾಲಕ ಪ್ರಮೋದ್ ಪೂಜಾರಿ ಎಂಬಾತನನ್ನು ಪೊಲೀಸರು ತಕ್ಷಣವೇ ಬಂಧಿಸಿದ್ದಾರೆ.
ಹಣದ ವಿಚಾರಕ್ಕೆ ಶುರುವಾದ ಗಲಾಟೆ
ಪೊಲೀಸರು ನೀಡಿದ ಮಾಹಿತಿಯಂತೆ, ಸುಜಿತ್ ಪಿಂಟೋ ಮನೆಗೆ ದಿನಸಿ ಸಾಮಗ್ರಿಗಳನ್ನು ಪೂರೈಸುತ್ತಿದ್ದ ಆಟೋ ಚಾಲಕ ಪ್ರಮೋದ್ಗೆ ಸುಜಿತ್ ಹಣ ನೀಡಲು ಬಾಕಿ ಇತ್ತು. ಈ ಬಾಕಿ ಹಣದ ವಿಚಾರವಾಗಿ ಚರ್ಚಿಸಲು ಪ್ರಮೋದ್ ಸುಜಿತ್ನನ್ನು ತಾನು ಇರುವ ಸ್ಥಳಕ್ಕೆ ಕರೆಸಿಕೊಂಡಿದ್ದನು. ಅಲ್ಲಿ ಇಬ್ಬರೂ ಮದ್ಯದ ಅಮಲಿನಲ್ಲಿ ಜಗಳವಾಡಿದ್ದು, ಮಾತಿಗೆ ಮಾತು ಬೆಳೆದು ಕೋಪಗೊಂಡ ಪ್ರಮೋದ್, ಕಬ್ಬಿಣದ ರಾಡ್ನಿಂದ ಸುಜಿತ್ ತಲೆಗೆ ಬಲವಾಗಿ ಹೊಡೆದು ಕೊಲೆ ಮಾಡಿದ್ದಾನೆ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ತಿಳಿಸಿದ್ದಾರೆ.
ಹಲವು ಕೊಲೆ ಪ್ರಕರಣಗಳಲ್ಲಿ ಭಾಗಿ
ಕೊಲೆಯಾದ ಸುಜಿತ್ ಪಿಂಟೋ ಹಿನ್ನೆಲೆ ಅತ್ಯಂತ ಕ್ರಿಮಿನಲ್ ಸ್ವರೂಪದ್ದಾಗಿದ್ದು, ಈತನ ವಿರುದ್ಧ ಹಲವು ಗಂಭೀರ ಪ್ರಕರಣಗಳಿದ್ದವು. ಮಣಿಪಾಲದ ಬಾರ್ ಒಂದರಲ್ಲಿ ನಡೆದ ಕ್ರಿಮಿನಲ್ ಹಿನ್ನೆಲೆಯ ಗುರುಭಟ್ ಎಂಬಾತನ ಹಾಡುಹಗಲಿನ ಕೊಲೆ ಹಾಗೂ ಹಿರಿಯಡ್ಕ ಕೋಟ್ನಕಟ್ಟೆಯಲ್ಲಿ ರೌಡಿಶೀಟರ್ ಪ್ರವೀಣ್ ಕುಲಾಲ್ ಕೊಲೆಗೆ ಈತನೇ ಸುಪಾರಿ ನೀಡಿದ್ದನೆಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್, ಡಿವೈಎಸ್ಪಿ ಬೆಳ್ಳಿಯಪ್ಪ ಹಾಗೂ ಬ್ರಹ್ಮಾವರ ವೃತ್ತ ನಿರೀಕ್ಷಕ ಗೋಪಿಕೃಷ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ.

