ಉಡುಪಿ:ಹಣಕಾಸಿನ ವಿಚಾರವಾಗಿ ಉಂಟಾದ ಗಲಾಟೆ ವಿಕೋಪಕ್ಕೆ ತಿರುಗಿ, ರೌಡಿಶೀಟರ್ ಸುಜಿತ್ ಪಿಂಟೊ (43) ಅವರನ್ನು ಕಬ್ಬಿಣದ ರಾಡ್ನಿಂದ ಹೊಡೆದು ಕೊಲೆ ಮಾಡಿರುವ ಘಟನೆ ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯ ಬೈಕಾಡಿಯಲ್ಲಿ ಮಂಗಳವಾರ ರಾತ್ರಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಪ್ರಮೋದ್ ಪೂಜಾರಿ ಹಾಗೂ ಆತನ ಸಹೋದರ ಪ್ರದೀಪ್ ಪೂಜಾರಿಯನ್ನು ಪೊಲೀಸರು ಬಂಧಿಸಿದ್ದಾರೆ.

ಮನೆಗೆ ಸಾಮಗ್ರಿಗಳನ್ನು ಪೂರೈಸುತ್ತಿದ್ದ ರಿಕ್ಷಾ ಚಾಲಕ ಪ್ರಮೋದ್ ಪೂಜಾರಿಗೆ ಸುಜಿತ್ ಪಿಂಟೊ ಹಣ ಪಾವತಿಸಲು ಬಾಕಿ ಇದ್ದುದೇ ಕೊಲೆಗೆ ಪ್ರಮುಖ ಕಾರಣ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರಮೋದ್, ಸುಜಿತ್ನನ್ನು ಬೈಕಾಡಿ ಸರ್ಕಲ್ ಬಳಿ ಬರುವಂತೆ ಕರೆದಿದ್ದ. ಅದರಂತೆ ಸುಜಿತ್ ತನ್ನ ಸ್ನೇಹಿತನೊಂದಿಗೆ ಅಲ್ಲಿಗೆ ಬಂದಿದ್ದ. ಈ ವೇಳೆ ಮದ್ಯದ ಅಮಲಿನಲ್ಲಿ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಗಲಾಟೆ ನಡೆದಿದೆ ಎನ್ನಲಾಗಿದೆ. ಗಲಾಟೆಯ ಸಂದರ್ಭದಲ್ಲಿ ಪ್ರಮೋದ್ ಕಬ್ಬಿಣದ ರಾಡ್ನಿಂದ ಸುಜಿತ್ನ ತಲೆಗೆ ಹೊಡೆದಿದ್ದು, ಇದರಿಂದ ಆತ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಳೆಯ ದ್ವೇಷವೂ ಕೊಲೆಗೆ ಕಾರಣ ಎಂಬ ಶಂಕೆ
ಸುಮಾರು ಐದು ವರ್ಷಗಳ ಹಿಂದೆ ಉಡುಪಿ ಸಂತೆಕಟ್ಟೆಯಿಂದ ಬೈಕಾಡಿಗೆ ಸ್ಥಳಾಂತರಗೊಂಡಿದ್ದ ಸುಜಿತ್ ಪಿಂಟೊ, ಪ್ರಮೋದ್ ಮತ್ತು ಪ್ರದೀಪ್ ಪೂಜಾರಿ ಒಂದೇ ತಂಡದಲ್ಲಿದ್ದವರು ಎನ್ನಲಾಗಿದೆ. ಇವರು ಮದ್ಯಪಾನ ಮಾಡಿದ ಸಂದರ್ಭದಲ್ಲಿ ಆಗಾಗ ಪರಸ್ಪರ ಗಲಾಟೆ ಮಾಡಿಕೊಳ್ಳುತ್ತಿದ್ದರು ಎಂದು ತಿಳಿದುಬಂದಿದೆ. ಇತ್ತೀಚಿನ ದಿನಗಳಲ್ಲಿ ಸುಜಿತ್, ಸಹೋದರರಿಬ್ಬರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಿಂಸೆ ನೀಡುತ್ತಿದ್ದ ಎಂಬ ಆರೋಪವೂ ಕೇಳಿಬಂದಿದೆ. ಈ ವಿಚಾರವಾಗಿ ಅವರ ನಡುವೆ ದ್ವೇಷ ಬೆಳೆದಿತ್ತು ಎನ್ನಲಾಗಿದ್ದು, ಕೊಲೆಗೆ ಹಣಕಾಸಿನ ವಿಚಾರದ ಜತೆಗೆ ಹಳೆಯ ವೈಷಮ್ಯವೂ ಕಾರಣವಾಗಿದೆಯೇ ಎಂಬ ನಿಟ್ಟಿನಲ್ಲಿ ತನಿಖೆ ನಡೆಯುವ ಸಾಧ್ಯತೆಯಿದೆ.
ಪರಾರಿಯಾಗಿದ್ದ ಪ್ರದೀಪ್ ಪೂಜಾರಿ ಬಂಧನ
ಘಟನೆ ನಡೆದ ಕೂಡಲೇ ಪೊಲೀಸರು ಪ್ರಮುಖ ಆರೋಪಿ ಪ್ರಮೋದ್ ಪೂಜಾರಿಯನ್ನು ಬಂಧಿಸಿದ್ದರು. ಘಟನೆಯ ಬಳಿಕ ಪರಾರಿಯಾಗಿದ್ದ ಆತನ ಸಹೋದರ ಪ್ರದೀಪ್ ಪೂಜಾರಿಗಾಗಿ ಶೋಧ ನಡೆಸಿದ ಪೊಲೀಸರು, ಬಳಿಕ ಆತನನ್ನೂ ಬಂಧಿಸಿದ್ದಾರೆ. ಪ್ರದೀಪ್ ರಿಕ್ಷಾ ಚಾಲಕನಾಗಿದ್ದು, ಪ್ರಮೋದ್ ಗಾರೆ ಕೆಲಸ ಮಾಡಿಕೊಂಡಿದ್ದ ಎಂದು ತಿಳಿದುಬಂದಿದೆ.
ಹಲವು ಕೊಲೆ ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಸುಜಿತ್
ಕೊಲೆಯಾದ ಸುಜಿತ್ ಪಿಂಟೊ ವಿರುದ್ಧ ಈ ಹಿಂದೆ ಹಲವು ಕೊಲೆ ಪ್ರಕರಣಗಳು ದಾಖಲಾಗಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ. 2018ರಲ್ಲಿ ಮಣಿಪಾಲದಲ್ಲಿ ನಡೆದ ಕ್ಲಬ್ ಮಾಲಕ ಗುರುಪ್ರಸಾದ್ ಭಟ್ ಕೊಲೆ ಪ್ರಕರಣ ಹಾಗೂ 2020ರಲ್ಲಿ ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ತೆಂಕನಿಡಿಯೂರು ಲಕ್ಷ್ಮಿನಗರದಲ್ಲಿ ನಡೆದ ಯೋಗೀಶ್ ಪೂಜಾರಿ ಕೊಲೆ ಪ್ರಕರಣಗಳಲ್ಲಿಯೂ ಸುಜಿತ್ ಆರೋಪಿಯಾಗಿದ್ದನು.
ಘಟನಾ ಸ್ಥಳಕ್ಕೆ ಬ್ರಹ್ಮಾವರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಂಧಿತ ಆರೋಪಿಗಳ ವಿಚಾರಣೆ ಸೇರಿದಂತೆ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

