ಮಂಗಳೂರು : ಅಪ್ರಾಪ್ರ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿರುವ ಆರೋಪಿಗಳಿಗೆ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ (ಪೋಕ್ಸೋ) ಎಫ್ಟಿಎಸ್ಸಿ-1 ನ್ಯಾಯಾಲಯವು ಶಿಕ್ಷೆಯನ್ನು ವಿಧಿಸಿದೆ.
ಬೆಳ್ತಂಗಡಿಯ ಇಳಂತಿಲದ ನಿವಾಸಿಯಾದ ಅಬ್ದುಲ್ ಕರೀಂ (39), ಮೊಗ್ರು ಗ್ರಾಮ ಪಚ್ಚಡ್ಕ ನಿವಾಸಿಯಾದ ಆಟೋರಿಕ್ಷಾ ಚಾಲಕ ಸಾದಿಕ್ (34) ಶಿಕ್ಷೆಗೊಳಗಾದ ಆರೋಪಿಗಳು.
ಜೂ.18,2023 ರಂದು, ಅಪ್ರಾಪ್ತ ಬಾಲಕಿಯು ಗ್ರಾಮಾಭಿವೃದ್ಧಿ ಯೋಜನೆಯ ಹಣ ಕಟ್ಟಲೆಂದು, ನಡೆದುಕೊಂಡು ಹೋಗುತ್ತಿದ್ದಾಗ ಆರೋಪಿಯಾದ ಕರೀಂ ಆಟೋವನ್ನು ನಿಲ್ಲಿಸಿ ಆಟೋದಲ್ಲಿ ಬಿಡುವುದಾಗಿ ತಿಳಿಸಿದ್ದ. ಆಟೋದೊಳಗೆ ಇನ್ನೋರ್ವ ಆರೋಪಿಯಾದ ಸಾದಿಕ್ ಕೂಡಾ ಆಟೋದಲ್ಲಿದ್ದ. ಬಾಲಕಿ ರಿಕ್ಷಾದಲ್ಲಿ ಕುಳಿತಾಗ, ಕರೀಂ ಬಾಲಕಿಗೆ 200 ರೂ. ನೀಡಿದಾಗ ಬಾಲಕಿ ಹಣವನ್ನು ವಾಪಸ್ ಆತನಿಗೆ ನೀಡಿದ್ದಾಳೆ, ನಂತರ ಆರೋಪಿಯು ಬೆಳ್ತಂಗಡಿಗೆ ಬರುತ್ತೀಯಾ ಎಂದಾಗ ಬರಲ್ಲ ಎಂದು ಬಾಲಕಿ ಹೇಳಿದ್ದಾಳೆ. ಆಗ ಆರೋಪಿಯು ಬಾಲಕಿಯ ಮೈ ಮೇಲೆ ಕೈ ಹಾಕಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಈ ಸಂದರ್ಭ ಬಾಲಕಿಯು ಆಟೋದಿಂದ ಹಾರಿ ಗಾಯಗೊಂಡಿದ್ದಾಳೆ.
ಒಂದನೇ ಆರೋಪಿಯಾಗಿರುವ ಅಬ್ದುಲ್ ಕರೀಂಗೆ ಪೋಕ್ಸೋ ಕಾಯ್ದೆಯಡಿಯಲ್ಲಿ 5 ವರ್ಷಗಳ ಜೈಲು, 5000 ರೂ. ದಂಡ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ದೌರ್ಜನ್ಯ ತಡೆ ಕಾಯಿದೆಯಡಿಯಲ್ಲಿ 5 ವರ್ಷ ಸಾದಾ ಸಜೆ ಮತ್ತು 5,000 ರೂ.ದಂಡ, ಇನ್ನೋರ್ವ ಆರೋಪಿಯಾದ ಸಾದಿಕ್ಗೆ ಪೋಕೋ ಕಾಯ್ದೆಯಡಿಯಲ್ಲಿ 3 ವರ್ಷಗಳ ಜೈಲು ಮತ್ತು 5,000 ರೂ. ದಂಡವನ್ನು ವಿಧಿಸಲಾಗಿದೆ.

