ಉಡುಪಿ : ಶಿಕ್ಷಣ, ಆರ್ಥಿಕ ಕ್ರೋಢೀಕರಣ ಸೇರಿದಂತೆ ವಿವಿಧ ವಿಷಯಗಳಲ್ಲಿನ ವಿಶೇಷವಾಗಿ ಸಾಧನೆಗೈದಿರುವ ಉಡುಪಿ ಜಿ.ಪಂ ಕೇಂದ್ರ ಸರಕಾರದ ಪಂಚಾಯತ್ರಾಜ್ ಇಲಾಖೆಯ ರಾಷ್ಟ್ರೀಯ ಪುರಸ್ಕಾರಕ್ಕೆ ಆಯ್ಕೆಯಾಗಿದೆ.
ಡಿ.11 ರಂದು ದಿಲ್ಲಿಯಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ನಡೆಯಲಿದೆ. ಜಿ.ಪಂ. ಸಿಇಒ ಪ್ರತೀಕ್ ಬಾಯಲ್ ಅವರು 2 ಕೋ.ರೂ. ನಗದಿನ ಪ್ರಶಸ್ತಿಯನ್ನು ಸ್ವೀಕರಿಸಲಿರುವರು.
ಉಡುಪಿಯು 155 ಗ್ರಾ. ಪಂ.ಗಳನ್ನು ಹೊಂದಿದೆ. ಪ್ರತಿ ಸೋಮವಾರದಂದು ಜಿಪಂ ಸಿಇಒ ಗ್ರಾ.ಪಂ. ಗಳ ನೀರು ಪೂರೈಕೆ ಸೇರಿದಂತೆ ವಿವಿಧ ಕಾರ್ಯಯೋಜನೆಗಳ ಪ್ರಗತಿ ಪರಿಶೀಲನೆ, ತಿಂಗಳಿಗೆ 2 ಬಾರಿ ಜಿಲ್ಲಾಧಿಕಾರಿಗಳ ಜೊತೆ ಸಭೆ, ವಾರ್ಡ್ ಸಭೆ, ಗ್ರಾಮ ಸಭೆ, ಶಾಲಾಭಿವೃದ್ಧಿಗೆ ಪ್ರತ್ಯೇಕ ಸಮಿತಿ ರಚನೆ, ಶೈಕ್ಷಣಿಕ ಕಾರ್ಯಕ್ರಮಗಳ ಅನುಷ್ಠಾನ ಗುಣಮಟ್ಟದ ಪರಿಶೀಲನೆ, ಶಿಶು, ಗರ್ಭಿಣಿ ಮರಣ ಸಂಭವಿಸದಂತೆ ಎಚ್ಚರ, ಅಪೌಷ್ಟಿಕತೆಯ ನಿವಾರಣೆ, ಸಾಂಕ್ರಾಮಿಕ ರೋಗಗಳ ನಿರ್ವಹಣೆ ಇತ್ಯಾದಿ ಕ್ರಮಗಳಿಗೆ ಈ ಪ್ರಶಸ್ತಿಯ ಲಭಿಸಿದೆ.
ಸಂಪನ್ಮೂಲ ಕ್ರೋಢೀಕರಣಕ್ಕೆ ನೀಡಿರುವ ಒತ್ತು, ಆನ್ಲೈನ್ ತೆರಿಗೆ ಪಾವತಿ, ತ್ಯಾಜ್ಯ ನಿರ್ವಹಣೆಯಲ್ಲಿ ದೇಶಕ್ಕೆ ಮಾದರಿ, ಗ್ರಾಮೀಣ ಭಾಗದಲ್ಲಿ ಎಂಆರ್ಎಫ್ ಘಟಕದ ಸ್ಥಾಪನೆ, ಆನ್ಲೈನ್ ಮೂಲಕ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ನೀಟ್ ಮತ್ತು ಸಿಇಟಿ ಕೋಚಿಂಗ್, ಎಸೆಸೆಲ್ಸಿ, ಪಿಯುಸಿಯಲ್ಲಿ ಅಗ್ರಸ್ಥಾನ, ಸಂಜೀವಿನಿ ಸಂಘಗಳ ಮೂಲಕ ಹಡಿಲು ಭೂಮಿ ಕೃಷಿ, ಇತ್ಯಾದಿ ಕ್ರಮಗಳಿಗಾಗಿ ಕೇಂದ್ರ ಸರಕಾರದ ಪಂಚಾಯತ್ರಾಜ್ ಇಲಾಖೆಯ ರಾಷ್ಟ್ರೀಯ ಪುರಸ್ಕಾರಕ್ಕೆ ಉಡುಪಿ ಜಿ.ಪಂ ಆಯ್ಕೆಯಾಗಿದೆ ಎಂದು ಜಿ.ಪಂ. ಸಹಾಯಕ ಕಾರ್ಯದರ್ಶಿಯಾದ ಪ್ರಶಾಂತ್ ಅವರು ಮಾಹಿತಿ ನೀಡಿದರು.

