ಬೆಳ್ತಂಗಡಿ : ಅಕ್ರಮವಾಗಿ ಗೋ ವಧೆ ಮಾಡಿ ಅದರ ಅವಶೇಷಗಳನ್ನು ಚಾರ್ಮಾಡಿಯ ಅನ್ನಾರು ಸೇತುವೆ ಬಳಿಯ ಮೃತ್ಯುಂಜಯ ನದಿಗೆ ಯಾರೋ ಕಿಡಿಗೇಡಿಗಳು ಉದ್ದೇಶ ಪೂರ್ವಕವಾಗಿ, ಸುಮಾರು 11 ಚೀಲಗಳಲ್ಲಿ ದನದ ಅವಶೇಷಗಳನ್ನು ಎಸೆದಿರುವ ಘಟನೆ ಡಿ. 17 ರಂದು ಬೆಳಕಿಗೆ ಬಂದಿದೆ.
ಮೃತ್ಯುಂಜಯ ನದಿಯ ಪರಿಸರದಲ್ಲಿ ಹಲವು ಕುಟುಂಬಗಳು ವಾಸವಾಗಿದ್ದು, ನದಿಯ ನೀರನ್ನು ದೈನಂದಿನ ಚಟುವಟಿಕೆಗಳಿಗೆ ಬಳಸುತ್ತಿದ್ದಾರೆ. ಶಾಲಾ ಮಕ್ಕಳನ್ನು ಸೇರಿದಂತೆ ಅನೇಕರು ಈ ಪರಿಸರದಲ್ಲಿ ತಿರುಗಾಡುತ್ತಿದ್ದು, ಸಾಂಕ್ರಾಮಿಕ ರೋಗದ ಭೀತಿಯೂ ಈಗ ಎದುರಾಗಿದೆ.
ಅಯ್ಯಪ್ಪ ಮಾಲಾಧಾರಿಗಳು ಇಲ್ಲಿ ಪ್ರತಿದಿನ ಸ್ನಾನಕ್ಕಾಗಿ ಬರುತ್ತಾರೆ, ಹಾಗಾಗಿ ಉದ್ದೇಶಪೂರ್ವಕವಾಗಿ ಈ ಕೃತ್ಯವನ್ನು ಎಸಗಲಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೃತ್ಯ ಎಸಗಿದವರ ವಿರುದ್ಧ ಸೂಕ್ತ ರೀತಿಯಲ್ಲಿ ಕಾನೂನು ಕ್ರಮ ಕೈಗೊಳ್ಳಬೇಕು. ಇಂತಹ ಘಟನೆಗಳು ಮತ್ತೆ ಮರುಕಳಿಸಿದಂತೆ ಗಮನ ಹರಿಸಬೇಕು ಎಂದು ವಿಹಿಂಪ ಬಜರಂಗ ದಳ ಬೆಳ್ತಂಗಡಿ ತಾಲೂಕು ಅಧ್ಯಕ್ಷರಾದ ದಿನೇಶ್ ಚಾರ್ಮಾಡಿ ಆಗ್ರಹಿಸಿದ್ದಾರೆ.
ಚಾರ್ಮಾಡಿ ಗ್ರಾ.ಪಂ. ನಿವಾಸಿಯಾಗಿರುವ ಶಾರದಾ ಅವರು ನೀಡಿದ ದೂರಿನ ಮೇರೆಗೆ ಧರ್ಮಸ್ಥಳ ಪೊಲೀಸ್ ಠಾಣೆ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

