ಟೀಮ್ ಇಂಡಿಯಾದ ಮಾಜಿ ಕ್ರಿಕೆಟ್ ಆಟಗಾರ, ಭಾರತ ಅಂಡರ್19 ಹಾಗೂ “ಎ’ ತಂಡದ ಮುಖ್ಯ ತರಬೇತುದಾರ ವಿ.ವಿ.ಎಸ್. ಲಕ್ಷ್ಮಣ್ ಅವರು ಬುಧವಾರ ಕುಟುಂಬ ಸಮೇತರಾಗಿ ಶ್ರೀ ಕೃಷ್ಣಮಠಕ್ಕೆ ಭೇಟಿ ನೀಡಿ ಶ್ರೀ ಕೃಷ್ಣಮುಖ್ಯಪ್ರಾಣ ದೇವರ ದರ್ಶನ ಪಡೆದರು.
ಅನಂತರ ಗೀತಾಮಂದಿರದಲ್ಲಿ ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರಿಂದ ಕೋಟಿಗೀತಾ ಲೇಖನ ಯಜ್ಞ ದೀಕ್ಷೆ ಸಹಿತ ಅನುಗ್ರಹ ಮಂತ್ರಾಕ್ಷತೆ ಪಡೆದರು.
ಶ್ರೀ ಕೃಷ್ಣಮಠದ ಜತೆಗೆ ಕರಾವಳಿ, ಮಲೆನಾಡು ಭಾಗದ ಶೃಂಗೇರಿ, ಹೊರನಾಡು, ಕೊಲ್ಲೂರು, ಮುರುಡೇಶ್ವರ ಹಾಗೂ ಗೋಕರ್ಣ ಕ್ಷೇತ್ರಕ್ಕೂ ಪತ್ನಿ ಜಿ.ಆರ್. ಶೈಲಜಾ, ಪುತ್ರ ಸರ್ವಜಿತ್ ಲಕ್ಷ್ಮಣ್, ಪುತ್ರಿ ಅಚಿಂತ್ಯಾ ಲಕ್ಷ್ಮಣ್ ಜತೆಗೂಡಿ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ.

