ಉಡುಪಿ: ಎಂಟು ವರ್ಷದ ಹಿಂದೆ ಗಾಂಜಾ ಮಾರಾಟ ಮಾಡುತ್ತಿದ್ದ ವೇಳೆ ಬಂಧಿತನಾಗಿದ್ದ ಆರೋಪಿಯನ್ನು ಉಡುಪಿಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಕಿರಣ್ ಎಸ್. ಗಂಗಣ್ಣನವರ್ ದೋಷಿ ಎಂದು ಪರಿಗಣಿಸಿ 2 ವರ್ಷ 6 ತಿಂಗಳ ಜೈಲು ಶಿಕ್ಷೆ ಮತ್ತು 20 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದ್ದಾರೆ.

ಅಂಬಲಪಾಡಿಯ ಅಖಿಲೇಶ್ ಶೆಟ್ಟಿ (25) ಶಿಕ್ಷೆಗೆ ಗುರಿಯಾದ ಆರೋಪಿ. ಕಡೆಕಾರು ಗ್ರಾಮದ ಕನ್ನರ್ಪಾಡಿ ದುರ್ಗಾಪರಮೇಶ್ವರಿ ಯುವಕ ಮಂಡಲದ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಆಧರಿಸಿ 2016ರ ಜು. 5ರಂದು ಜಿಲ್ಲಾ ಅಪರಾಧ ಪತ್ತೆ ದಳದ ಪೊಲೀಸ್ ನಿರೀಕ್ಷಕ ರತ್ನಕುಮಾರ್ ಜಿ. ಅವರು ಎಸ್ಪಿಯ ಅನುಮತಿ ಪಡೆದು ತಹಶೀಲ್ದಾರ್ ಗುರುಪ್ರಸಾದ್ ಮತ್ತು ಸಿಬಂದಿಯೊಂದಿಗೆ ದಾಳಿ ನಡೆಸಿದ್ದರು.

ಈ ವೇಳೆ ಆರೋಪಿ ಅಖಿಲೇಶ್ ಪೊಲೀಸರನ್ನು ನೋಡಿ ಓಡಲು ಪ್ರಯತ್ನಿಸಿದಾಗ ಆತನನ್ನು ವಶಕ್ಕೆ ಪಡೆದು ತಪಾಸಣೆ ನಡೆಸಿದಾಗ ಕೈಯಲ್ಲಿದ್ದ ಪ್ಲಾಸ್ಟಿಕ್ ಚೀಲದಲ್ಲಿ 1.150 ಕೆ.ಜಿ. ಗಾಂಜಾ ಪತ್ತೆಯಾಗಿತ್ತು. ತನಿಖೆಯಲ್ಲಿ ತಾನು ಗಾಂಜಾವನ್ನು ಉಪಯೋಗಿಸುತ್ತಿದ್ದು, ಉಡುಪಿ ಹಾಗೂ ಮಣಿಪಾಲದಲ್ಲಿ ಗಾಂಜಾ ಮಾರಾಟ ಮಾಡುತ್ತಿರುವುದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದ. ಪೊಲೀಸರು ಆರೋಪಿ ಹಾಗೂ ಗಾಂಜಾವನ್ನು ವಶಕ್ಕೆ ಪಡೆದು ಮಲ್ಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಅನಂತರದಲ್ಲಿ ಪ್ರಕರಣವನ್ನು ಉಡುಪಿ ವೃತ್ತ ನಿರೀಕ್ಷಕರಾಗಿದ್ದ ಟಿ.ಆರ್. ಜೈಶಂಕರ್ ಅವರು ತನಿಖೆ ನಡೆಸಿ ಆರೋಪಿಯ ವಿರುದ್ಧ ಎನ್.ಡಿ.ಪಿ.ಎಸ್. ಕಾಯ್ದೆಯಡಿ ಉಡುಪಿಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಸರಕಾರದ ಪರ ಸರಕಾರಿ ಅಭಿಯೋಜಕರಾದ ಜಯರಾಮ ಶೆಟ್ಟಿ ವಾದ ಮಂಡಿಸಿದ್ದರು.


