114 ವರ್ಷಗಳ ಬಳಿಕ ನಡೆಯುತ್ತಿರುವ ವಿಶೇಷ ಮಹಾಕುಂಭಮೇಳದಲ್ಲಿ ಅಖಿಲ ಭಾರತೀಯ ಸಂತ ಸಮಿತಿ ಕರ್ನಾಟಕ ಸಂಘದ ಸಂತರು ಭಾಗವಹಿಸಿದ್ದಾರೆ.

ಮಹಾಕುಂಭ ಮೇಳಕ್ಕೆ ಪ್ರಯಾಗ್ ರಾಜ್ ತಲುಪಿರುವ ಸಂತರ ತಂಡ ಜನವರಿ 25 ರಿಂದ 30 ತನಕ ಕುಂಭ ಮೇಳದಲ್ಲಿ ಭಾಗವಹಿಸಲಿದೆ. ನಾನಾ ಯತಿಶ್ರೇಷ್ಠರು ಭಾಗವಹಿಸುವ ಮಹಾಕುಂಭ ಮೇಳದಲ್ಲಿ ಅಖಿಲ ಭಾರತೀಯ ಸಂತ ಸಮಿತಿಯ ಬೈಠಕ್ ಕೂಡಾ ನಡೆಸಿದೆ.

ಜನವರಿ 21 ಮತ್ತು 22 ರಂದು ಈ ಬೈಠಕ್ ನಡೆದಿದ್ದು, ಗಂಗಾ ಮಹಾಸಭೆ ಹಾಗೂ ಅಖಿಲ ಭಾರತೀಯ ಸಂತ ಸಮಿತಿ ಜಂಟಿಯಾಗಿ ಕಾರ್ಯಕ್ರಮ ಆಯೋಜಿಸಿದೆ. ಅಖಿಲ ಭಾರತೀಯ ಸಂತ ಸಮಿತಿಯ ಕರ್ನಾಟಕ ರಾಜ್ಯಾಧ್ಯಕ್ಷ ಓಂ ಶ್ರೀ ಮಠದ ಮಹಾಮಂಡಲೇಶ್ವರ ಸ್ವಾಮಿ ಓಂ ಶ್ರೀ ವಿದ್ಯಾನಂದ ಸರಸ್ವತಿ , ಮಾತಾಶ್ರೀ ಶಿವಜ್ಞಾನಮಹಿ ಸರಸ್ವತಿ, ಸಮಿತಿ ಮುಖ್ಯ ಕಾರ್ಯದರ್ಶಿ ಕೊಡಗು ಅರಸೀಗುಪ್ಪೆ ಶ್ರೀ ಮಂಜುನಾಥ ಕ್ಷೇತ್ರದ ಸ್ವಾಮಿ ರಾಜೇಶ್ ನಾಥ ಗುರೂಜಿ, ಸಂಘಟನಾ ಕಾರ್ಯದರ್ಶಿ ಕೊಡಗು ವಿರಕ್ತ ಮಠದ ಶ್ರೀ ನಿಶ್ಚಲ ನಿರಂಜನ ದೇಶಿ ಕೇಂದ್ರ ಸ್ವಾಮಿಜಿ, ದಕ್ಷಿಣ ಪ್ರಾಂತ ಸಂಘಟನಾ ಕಾರ್ಯದರ್ಶಿ ಅರಸಿಕೆರೆ ರುದ್ರಾಕ್ಷ ಫೌಂಡೇಶನ್ ಶ್ರೀ ಜಯಪ್ರಕಾಶ್ ಗುರೂಜಿ ಸೇರಿದಂತೆ ಹತ್ತಾರು ಸ್ವಾಮೀಜಿಗಳು ಮಹಾಕುಂಭದಲ್ಲಿ ಭಾಗಿಯಾಗಿದ್ದಾರೆ.



