ಮಂಗಳೂರು:- ನೇತ್ರಾವತಿ ನದಿ ಸಮೀಪದಲ್ಲಿರುವ ಇರುವ ಫಲ್ಗುಣಿ ನದಿ ತೀರದಲ್ಲಿ ಅಕ್ರಮ ಮರಳುಗಾರಿಕೆ ಅನೇಕ ದಿನಗಳಿಂದ ನಡೆಯುತ್ತಿತ್ತು. ಈ ಪ್ರಕರಣವನ್ನು ಪತ್ತೆ ಹಚ್ಚಿ ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳ ಸಹಿತ ಮರಳನ್ನು ವಶಪಡಿಸಿಕೊಂಡ ಘಟನೆ ಮಂಗಳೂರಿನ ಕಣ್ಣೂರು ಮಸೀದಿ ಹಿಂಭಾಗದ ನದಿ ತೀರದಲ್ಲಿ ನಡೆದಿದೆ. ಸುಭಾಷ್ (65), ಲಲಿತ್ ಸಾನಿ (25), ಧರ್ಮೇಂದ್ರ (28) ಬಂಧಿತ ಆರೋಪಿಗಳು. ಮರಳು ಕಳ್ಳತನ ಮಾಡುತ್ತಿದ್ದಾಗ ಪೊಲೀಸರು ದಿಢೀರ್ ದಾಳಿ ಮಾಡಿದ್ದಾರೆ. ಈ ಸಂದರ್ಭ ಆರೋಪಿಗಳು ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ.
ಸ್ಥಳದಲ್ಲಿ ಮರಳುಗಾರಿಕೆಗೆ ಉಪಯೋಗಿಸಿದ ಮೂರು ಟಿಪ್ಪರ್, ತಲಾ ಒಂದೊಂದು ಯುನಿಟ್ ಮರಳು ತುಂಬಿಸಿದ್ದ 2 ದೋಣಿ, 12 ಬುಟ್ಟಿಗಳು, 6 ಹಾರೆಗಳು ಹಾಗೂ ಕಬ್ಬಿಣದ ಏಣಿ ಸೇರಿದಂತೆ ಒಟ್ಟು ಸುಮಾರು 18,09,000 ರೂ. ಮೌಲ್ಯದ ಸ್ವತ್ತನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳು 6 ಕಬ್ಬಿಣದ ದೋಣಿಗಳ ಮೂಲಕ ಮರಳುಗಾರಿಕೆ ನಡೆಸಿರುವುದು ಕಂಡು ಬಂದಿದೆ. 13 ಮೆಟ್ರಿಕ್ ಟನ್ ಮರಳು ಶೇಖರಿಸಲಾಗಿತ್ತು. ವಶಕ್ಕೆ ಪಡೆಯಲಾದ ಮರಳಿನ ಮೌಲ್ಯ 9,100 ರೂ. ಮತ್ತು ದೋಣಿಗಳ ಮೌಲ್ಯ 4,50,000 ರೂ. ಎಂದು ಅಂದಾಜಿಸಲಾಗಿದೆ. ಈ ಕುರಿತು ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

