ಉಡುಪಿ:- ಉಡುಪಿಯ ನೇಜಾರಿನಲ್ಲಿ ಮನೆಗೆ ನುಗ್ಗಿ ತಾಯಿ ಮತ್ತು ಮಕ್ಕಳನ್ನು ಭೀಕರವಾಗಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಸಾಕ್ಷ್ಯಗಳ ವಿಚಾರಣೆಯ ಆಡಿಯೋ ಮತ್ತು ವಿಡಿಯೋ ದಾಖಲಿಸಬೇಕೆಂಬ ಆರೋಪಿ ಪ್ರವೀಣ್ ಚೌಗುಲೆ ಸಲ್ಲಿಸಿದ ಅರ್ಜಿ ಮತ್ತು ಆರೋಪಿಯ ಕಾರನ್ನು ವಶಕ್ಕೆ ನೀಡಬೇಕೆಂಬ ಬ್ಯಾಂಕಿನವರ ಅರ್ಜಿಯ ಕುರಿತ ಅಂತಿಮ ಆದೇಶವನ್ನು ಉಡುಪಿ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮಾ.7ಕ್ಕೆ ಮುಂದೂಡಿದೆ.
ವಿಚಾರಣೆಯ ಹಿನ್ನೆಲೆಯಲ್ಲಿ ಫೆ.ಇಪ್ಪತ್ತಕ್ಕೆ ಬೆಂಗಳೂರು ಜೈಲಿನಲ್ಲಿರುವ ಆರೋಪಿ ಪ್ರವೀಣ್ ಚೌಗುಲೆಯನ್ನು ವೀಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಆರೋಪಿ ಕೃತ್ಯಕ್ಕೆ ಬಳಸಿದ ಕಾರಿನ ಸಾಲದ ಕಂತು ಪಾವತಿಸದ ಹಿನ್ನೆಲೆ ತಮ್ಮ ವಶಕ್ಕೆ ನೀಡುವ ಕುರಿತು ಬ್ಯಾಂಕ್ ಪರ ವಕೀಲರು ವಾದ ಮಂಡಿಸಿದರು. ಆರೋಪಿ ಪರ ವಕೀಲರು, ಕಾರನ್ನು ಬ್ಯಾಂಕಿನವರ ವಶಕ್ಕೆ ನೀಡಲು ನಮ್ಮ ಅಭ್ಯಂತರವಿಲ್ಲ ಎಂದು ತಿಳಿಸಿದರು.
ಆದರೆ ವಿಶೇಷ ಸರಕಾರಿ ಅಭಿಯೋಜಕರು, ಕಾರನ್ನು ಬ್ಯಾಂಕಿನವರಿಗೆ ನೀಡಿದರೆ, ಮುಂದೆ ಅವರು ಅದನ್ನು ಮಾರಾಟ ಮಾಡಿದರೆ ಸಾಕ್ಷ್ಯ ವಿಚಾರಣೆಗೆ ತೊಂದರೆ ಆಗುತ್ತದೆ ಎಂಬುದಾಗಿ ಆಕ್ಷೇಪಣೆ ಸಲ್ಲಿಸಿದರು. ಈ ವಾದ ಪ್ರತಿವಾದ ವನ್ನು ಆಲಿಸಿದ ನ್ಯಾಯಾಧೀಶ ಸಮಿವುಲ್ಲಾ, ಈ ಅರ್ಜಿಯ ಕುರಿತ ಅಂತಿಮ ಆದೇಶವನ್ನು ಮಾ.7ಕ್ಕೆ ಕಾಯ್ದಿರಿಸಿ ಆದೇಶ ನೀಡಿದರು.


