ಪಡುಬಿದ್ರಿ: ಇತ್ತೀಚೆಗೆ ದ.ಕ ಮತ್ತು ಉಡುಪಿ ಜಿಲ್ಲೆಯಲ್ಲಿ ನಿರಂತರವಾಗಿ ಕಾನೂನುಬಾಹಿರವಾಗಿ ನಡೆಯುತ್ತಿರುವ ಮರಳು ಸಾಗಾಟ ಪ್ರಕರಣಗಳು ದಾಖಲಾಗುತ್ತಿದೆ. ಇದೀಗ ಕಾರ್ಕಳದಿಂದ ಪಡುಬಿದ್ರಿ ಜಂಕ್ಷನ್ ಕಡೆಗೆ ಬರುತ್ತಿದ್ದ ಟಿಪ್ಪರ್ ನಲ್ಲಿ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದು ಪೊಲೀಸರು ಪತ್ತೆ ಹಚ್ಚಿದ್ದಾರೆ.
ರಾತ್ರಿ ಗಸ್ತು ನಿರತ ಪಡುಬಿದ್ರಿ ಪಿಎಸ್ಐ ಪ್ರಸನ್ನ ಅವರು ಟಿಪ್ಪರ್ ನಿಲ್ಲಿಸಲು ಹೇಳಿದಾಗ ಕೇರ್ ಮಾಡದೆ ಚಾಲಕ ಮುಂದಕ್ಕೆ ಹೋಗಿ ಪೆಟ್ರೋಲ್ ಬಂಕ್ ಬಳಿ ನಿಲ್ಲಿಸಿ ಚಾಲಕ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ. ಟಿಪ್ಪರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಅದರಲ್ಲಿ ಹತ್ತು ಸಾವಿರ ಬೆಲೆ ಬಾಳುವ ಸುಮಾರು ಮೂರು ಯೂನಿಟ್ ಗಳಷ್ಟು ಮರಳನ್ನು ಅಕ್ರಮವಾಗಿ ಸಾಗಿಸಲಾಗುತ್ತಿತ್ತು ಎಂಬ ಮಾಹಿತಿ ಲಭ್ಯವಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.


