ಉಡುಪಿ: ಕುಂದಾಪುರ ತಾಲೂಕಿನ ಶಂಕರನಾರಾಯಣ ಗ್ರಾಮದಲ್ಲಿ ಶೃಂಗೇರಿ ಶ್ರೀಗಳು ಭೂದಾನ ನೀಡಿದ್ದಂತಹ ಪ್ರಾಚೀನ ಶಿಲಾಶಾಸನವೊಂದು ಪತ್ತೆಯಾಗಿದೆ.
ಹೆರವಳ್ಳಿಯ ಪ್ರಶಾಂತ್ ಹೆಗ್ಡೆ ಎಂಬವರ ಮನೆಯ ಅಂಗಳದಲ್ಲಿ ಶೃಂಗೇರಿ ಶ್ರೀ ಶಾರದಾ ಪೀಠದ 13ನೇ ಜಗದ್ಗುರುಗಳಾದ, ಹಾಲಾಡಿ ಒಡೆಯರೆಂದೆ ಖ್ಯಾತರಾಗಿದ್ದ ಶ್ರೀ ನರಸಿಂಹ ಭಾರತಿ ಗುರುಗಳು ಶ್ರೀ ತೀರ್ಥಮುತ್ತೂರು ಮಠದ ಶ್ರೀ ಜ್ಞಾನೇಂದ್ರ ಭಾರತಿ ಗುರುಗಳವರಿಗೆ ಭೂ ದಾನ ನೀಡಿರುವ ಶಿಲಾಶಾಸನ ಇದಾಗಿದ್ದು ಕೌತುಕ ಹುಟ್ಟಿಸಿದೆ.
ಕ್ರಿ. ಶ.1399 ಮೇ 01 ಬುಧವಾರದ ಕಾಲಘಟ್ಟಕ್ಕೆ ಸರಿಹೊಂದುವ ಶಾಸನ ಇದಾಗಿದ್ದು, ಶಾಸನದ ಮೇಲ್ಬಾಗದಲ್ಲಿ ಸೂರ್ಯ ಚಂದ್ರರ ಕೆತ್ತನೆ, ಬಲಭಾಗದಲ್ಲಿ ಭಕ್ತನ ಚಿತ್ರದ ಕೆತ್ತನೆ, ದೀಪದ ಕಂಬ, ಮಧ್ಯಭಾಗದಲ್ಲಿ ಶಿವಲಿಂಗ ಹಾಗೂ ಎಡಭಾಗದಲ್ಲಿ ಕರುವಿಗೆ ಹಾಲುಣಿಸುವ ಗೋವಿನ ಚಿತ್ರದ ಕೆತ್ತನೆ ಇದೆ.
ಕನ್ನಡ ಭಾಷೆ ಮತ್ತು ಕನ್ನಡ ಲಿಪಿಯಲ್ಲಿ ಶಾಸನವಿದ್ದು ಎತ್ತರದಲ್ಲಿ 5 ಅಡಿಗಿಂತ ಹೆಚ್ಚಿದೆ. ಇದು ವಿಜಯನಗರದ ಅರಸ ಇಮ್ಮಡಿ ಹರಿಹರರಾಯನ ಕಾಲಘಟ್ಟದ ಶಾಸನವಾಗಿದೆ.
ಹಲವು ವರ್ಷಗಳ ಹಿಂದೆ ನಿಧಿಗಳ್ಳರು ಶಾಸನವನ್ನು ಅಗೆದು ಹಾಕಿದ್ದು ಶಾಸನದ ಅರ್ಧ ಭಾಗ ಕತ್ತರಿಸಲ್ಪಟ್ಟಿದೆ. ಅದನ್ನು ಜೋಡಿಸಿ ಪ್ರಶಾಂತ್ ಹೆಗ್ಡೆಯವರ ಮನೆಯವರು ಶಾಸನವನ್ನು ಸಂರಕ್ಷಣೆ ಮಾಡಿದ್ದಾರೆ ಹಾಗೂ ಇವರ ಕುಟುಂಬದವರು ಈ ಶಾಸನಕ್ಕೆ ವರ್ಷಕ್ಕೊಮ್ಮೆ ಪೂಜೆ ನೆರವೇರಿಸುತ್ತಾ ಬಂದಿದ್ದಾರೆ.
ಈ ಶಾಸನದಲ್ಲಿ 35 ಸಾಲುಗಳು ಮೇಲ್ಭಾಗದಲ್ಲಿ ಕಂಡು ಬಂದಿದೆ. ಶಾಸನದಲ್ಲಿ ಬೊಮ್ಮಣ್ಣ, ಸಿಂಗಸೆಟ್ಟಿ, ಗೋವಿಂದ ಭಟ್ಟ, ಕೃಷ್ಣ ಸೇನಾಭೊವ ಹಾಗೂ ಶಂಕರನಾರಾಯಣ ಎಂಬ ಸ್ಥಳದ ಹೆಸರುಗಳ ಉಲ್ಲೇಖವಿದೆ ಎಂದು ಶಾಸನತಜ್ಞ ಬೆಂಗಳೂರಿನ ಎಸ್ ಕಾರ್ತಿಕ್ ಅವರು ತಿಳಿಸಿದ್ದಾರೆ.
ವಿದ್ವಾನ್ ವಾಸುದೇವ ಜೋಯಿಸ್ ಹಾಲಾಡಿಯವರೂ ಕೂಡ ಈ ಶಾಸನವನ್ನು ಸಂರಕ್ಷಿಸಬೇಕೆಂದು, ಹಾಗೂ ತಮ್ಮ ಚಿಂತನೆಯಲ್ಲಿ ಇದು ಶೃಂಗೇರಿಗೆ ಸಂಬಂಧಿಸಿದ್ದು ಎಂಬುದಾಗಿ ಬಂದಿದ್ದು ಈ ಪೂರ್ವದಲ್ಲಿ 4-5 ವರ್ಷಗಳ ಹಿಂದೆಯೇ ಮನೆಯವರಿಗೆ ತಿಳಿಸಿದ್ದಾರೆ ಎನ್ನಲಾಗಿದೆ.

