ಕಾರ್ಕಳ: ಕಾರ್ಕಳ ತಾಲ್ಲೂಕಿನ ಮಾಳದ ಶ್ರೀ ಮಹಾವಿಷ್ಣುಮೂರ್ತಿ ದೇಗುಲದ ಬ್ರಹ್ಮಕಲಶೋತ್ಸವ ಎಪ್ರಿಲ್ ಹದಿನೆಂಟರವರೆಗೆ ನಡೆಯಲಿದ್ದು ಹಾಳೆ ತಟ್ಟೆಯಿಂದ ರಚನೆಯಾದ ಸ್ವಾಗತ ದ್ವಾರ ವಿಶೇಷವಾಗಿ ಗಮನ ಸೆಳೆಯುತ್ತಿದೆ.
ಪ್ಲಾಸ್ಟಿಕ್ ಮುಕ್ತ ಪರಿಕಲ್ಪನೆಯಲ್ಲಿ ಹೊಸ ಶೈಲಿಯಲ್ಲಿ ಸ್ವಾಗತ ದ್ವಾರ ರೂಪಿಸಬೇಕು ಎಂಬ ನೆಲೆಯಲ್ಲಿ ವಿಷ್ಣುಮೂರ್ತಿ ಕ್ರಿಕೆಟರ್ಸ್ ತಂಡದ ಸಹಕಾರದೊಂದಿಗೆ ನಿರ್ಮಾಣ ಮಾಡಿದ್ದಾರೆ. ಇಲ್ಲಿ ಸುಮಾರು ಎರಡು ಸಾವಿರ ಹಾಳೆ ತಟ್ಟೆ ಮತ್ತು ಅಡಿಕೆ ಕಂಗನ್ನು ಬಳಕೆ ಮಾಡಲಾಗಿದೆ.
ಈ ಸ್ವಾಗತ ದ್ವಾರ ಇಪ್ಪತ್ತಾರು ಅಡಿ ಎತ್ತರ, ಇಪ್ಪತ್ತೆರಡು ಅಡಿ ಅಗಲವಿದ್ದು ಹಾಳೆತಟ್ಟೆಯನ್ನು ಕ್ರಮವಾಗಿ ಜೋಡಿಸಲಾಗಿದೆ. ಬರುವ ಭಕ್ತಾದಿಗಳಿಗೆ ಇದು ಆಕರ್ಷಕ ಕೇಂದ್ರವಾಗಿ ಕಂಗೊಳಿಸುತ್ತಿದೆ.

