ಬ್ರಹ್ಮಾವರ: ಕೆಲಸ ಮಾಡುತ್ತಿರುವಾಗಲೇ ವ್ಯಕ್ತಿಯೋರ್ವರು ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಬ್ರಹ್ಮಾವರ ತಾಲ್ಲೂಕಿನ ಯಡ್ತಾಡಿಯಲ್ಲಿ ನಡೆದಿದೆ. ಬ್ರಹ್ಮಾವರದ ಮಂಜುನಾಥ (52) ಮೃತ ದುರ್ದೈವಿ.
ಇವರು ದ್ವಾರಕ ಬಾರ್ & ರೆಸ್ಟೋರೆಂಟ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಒಂದು ತಿಂಗಳ ರಜೆ ಮುಗಿಸಿ ದಿನಾಂಕ 15ರಂದು ಮನೆಯಿಂದ ವಾಪಸ್ಸು ಕೆಲಸಕ್ಕೆ ಬಂದಿದ್ದಾರೆ.
ಇವರಿಗೆ ಮದ್ಯಸೇವನೆ ಮಾಡುವ ಚಟವಿದ್ದು ಉಬ್ಬಸ (ಅಸ್ತಮ) ಖಾಯಿಲೆಯಿಂದ ಕೂಡಾ ಬಳಲುತ್ತಿದ್ದರು. ಅದಕ್ಕೆ ಔಷಧಿ ಕೂಡಾ ನಡೆಯುತ್ತಿತ್ತು. ಇದ್ದಕಿದ್ದಂತೆ 16ರಂದು ರಾತ್ರಿ ರೆಸ್ಟೋರೆಂಟ್ನಲ್ಲಿ ಕೆಲಸ ಮಾಡುತ್ತಿರುವಾಗ ಉಬ್ಬಸ (ಅಸ್ತಮ) ಬಂದು ಒಮ್ಮೆಲೆ ಕುಳಿತಲ್ಲಿಂದಲೇ ಕುಸಿದು ಬಿದ್ದಿದ್ದಾರೆ.
ರತ್ನಾಕರ್ ಮತ್ತು ಅಲ್ಲಿನ ಸಿಬ್ಬಂದಿಗಳು ಮಂಜುನಾಥರವರನ್ನು ಉಪಚರಿಸಿ ಅಂಬುಲೆನ್ಸ್ನಲ್ಲಿ ಚಿಕಿತ್ಸೆಗಾಗಿ ಬ್ರಹ್ಮಾವರ ಪ್ರಣವ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ರಾತ್ರಿ 9 ಗಂಟೆಗೆ ಪರೀಕ್ಷಿಸಿದ ವೈದ್ಯರು ಮಂಜುನಾಥ ರವರು ಈಗಾಗಲೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

