ಉಡುಪಿ/ದ.ಕ: ರಾಜ್ಯದಲ್ಲಿ ಈಗಾಗಲೇ ಬಿಸಿಲು ಕಡಿಮೆಯಾಗಿ ವರುಣನ ಆರ್ಭಟ ಶುರುವಾಗಿದೆ. ಬೆಂಗಳೂರಿನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಜನ ಕಕ್ಕಾಬಿಕ್ಕಿಯಾಗಿದ್ದಾರೆ. ರೆಡ್ ಅಲರ್ಟ್ ಕೂಡಾ ಘೋಷಣೆಯಾಗಿದೆ. ಇದೀಗ ಉಡುಪಿ, ದ.ಕ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲೂ ನಾಳೆ ಭಾರೀ ಮಳೆಯಾಗುವ ಸಾಧ್ಯತೆ ಇದ್ದು ಈ ಹಿನ್ನೆಲೆ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಣೆ ಮಾಡಿದೆ.
ಕರಾವಳಿ ಭಾಗದಲ್ಲಿ ಸುಂಟರಗಾಳಿ ಬೀಸುವ ಸಾಧ್ಯತೆ ಇದ್ದು ಮೀನುಗಾರರು ನೀರಿಗಿಳಿಯದಂತೆ ಖಡಕ್ ಎಚ್ಚರಿಕೆ ನೀಡಲಾಗಿದೆ. ದ.ಕ, ಉಡುಪಿ ಭಾಗದಲ್ಲಿ ಇಂದು ಕೂಡಾ ದಿಢೀರ್ ಸುರಿದ ಮಳೆಗೆ ಅವಾಂತರ ಸೃಷ್ಟಿಯಾಗಿದೆ.
ಉಡುಪಿ, ಮಣಿಪಾಲ, ಇಂದ್ರಾಳಿ, ಪರ್ಕಳ ಸಹಿತ ಹಲವು ಕಡೆ ಧಾರಾಕಾರ ಮಳೆಯಾಗಿದೆ. ಇದರಿಂದ ವಾಹನ ಸಂಚಾರ ಕೂಡಾ ಸ್ವಲ್ಪ ಮಟ್ಟಿಗೆ ಅಸ್ತವ್ತಸ್ತವಾಗಿದೆ.


