ಸಾಮಾನ್ಯವಾಗಿ ನಾವು ಪಿಎಫ್ ಹಣವನ್ನು ತೆಗೆಯಬೇಕಾದಲ್ಲಿ ಅನೇಕ ಪ್ರಕ್ರಿಯೆಗಳನ್ನು ಮುಗಿಸಿದರೂ ಕೂಡಾ ಅನೇಕ ಸಮಯ ಅದಕ್ಕಾಗಿ ಕಾಯಬೇಕಾಗುತ್ತದೆ. ಎಷ್ಟೋ ಸಲ ಅನಿವಾರ್ಯದ ಸಮಯದಲ್ಲಿ ಅದು ಕೈಗೆ ಸಿಗದೆ ಇರಬಹುದು. ಆದರೆ ಇನ್ಮುಂದೆ ಚಿಂತೆಯಿಲ್ಲ ಬಿಡಿ. ನೌಕರರ ಭವಿಷ್ಯ ನಿಧಿ ಸಂಸ್ಥೆಯು ಡಿಜಿಟಲ್ ರೂಪಾಂತರದ ಅಡಿಯಲ್ಲಿ ಪಿಎಫ್ ಚಂದಾದಾರರಿಗೆ ಗುಡ್ ನ್ಯೂಸ್ ಒಂದನ್ನು ನೀಡಿದೆ.
ಇನ್ಮುಂದೆ ಪಿಎಫ್ ಹಣವನ್ನು ಯುಪಿಐ ಅಥವಾ ಎಟಿಎಂ ಮೂಲಕವೂ ಪಡೆಯಬಹುದಾಗಿದೆ. ಯುಪಿಐ ಮುಖೇನವೂ ಭವಿಷ್ಯದಲ್ಲಿ ಪಿಎಫ್ ಕ್ಲೈಮ್ ಮಾಡಬಹುದು. ಈ ಹೊಸ ವ್ಯವಸ್ಥೆ ಮೇ ತಿಂಗಳ ಕೊನೆಯಲ್ಲಿ ಅಥವಾ ಜೂನ್ ನಲ್ಲಿ ಆರಂಭವಾಗುವ ನಿರೀಕ್ಷೆಯಿದೆ ಎಂಬ ಮಾಹಿತಿ ಲಭಿಸಿದೆ.
ಇನ್ಮುಂದೆ ಚಂದಾದಾರರಿಗೆ ಸಹಾಯವಾಗುವಂತೆ ಈ ಹೊಸ ಅನುಕೂಲತೆಯನ್ನು ಕಲ್ಪಿಸಲಾಗುತ್ತಿದೆ. ಚಂದಾದಾರರು ಇದರ ಪ್ರಯೋಜನವನ್ನು ಪಡೆದುಕೊಳ್ಳಬಹುದು ಎಂದು ಕಾರ್ಮಿಕ ಮತ್ತು ಉದ್ಯೋಗ ಕಾರ್ಯದರ್ಶಿ ಹೇಳಿದ್ದಾರೆ.

