ಶಿರಿಯಾರ: ಕುಂದಾಪುರದ ಶಿರಿಯಾರ ಗುಡ್ಡಟ್ಟು ಗುಡ್ಡೆ ಅಂಗಡಿ ರಸ್ತೆ ಅಗಲೀಕರಣದ ಉದ್ದೇಶ ಒಳ್ಳೆಯದೇ ಆಗಿದ್ದರೂ ಇದಕ್ಕೆ ಮಾಡಿರುವ ಪರ್ಯಾಯ ವ್ಯವಸ್ಥೆ ಸಮರ್ಪಕವಾಗಿಲ್ಲ ಎಂಬ ಆರೋಪ ಕೇಳಿಬಂದಿದೆ.

ಅನೇಕ ಸಮಯದಿಂದ ಜನರು ಈ ಪ್ರದೇಶದಲ್ಲಿ ಸಂಚರಿಸಲು ಕಷ್ಟ ಪಡುತ್ತಿದ್ದಾರೆ. ಇದೀಗ ಮಳೆ ಬರುವ ಸಮಯದಲ್ಲೇ ಕಾಮಗಾರಿ ಪ್ರಾರಂಭಿಸಿದ್ದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಈ ರಸ್ತೆಯ 3 ಕಡೆಗಳಲ್ಲಿ ಮೋರಿ ಅಗಲೀಕರಣ ಮಾಡುವ ಸಲುವಾಗಿ ರಸ್ತೆಯನ್ನು ಬ್ಲಾಕ್ ಮಾಡಿ ಅಲ್ಲಿಯೇ ಬದಿಯಲ್ಲಿ ಬದಲಿ ವ್ಯವಸ್ಥೆ ಮಾಡಿಕೊಟ್ಟಿದ್ದು ಆ ಬದಲಿ ರಸ್ತೆಯಲ್ಲಿ ಮಳೆ ಬರುವಾಗ ಸಂಚರಿಸಬಹುದು. ಆದರೆ ಮಳೆ ಬಂದು ಸ್ವಲ್ಪ ಸಮಯದ ನಂತರ ಬದಲಿ ರಸ್ತೆ ಕೆಸರು ಗದ್ದೆಯಂತಾಗಿ ಆ ರಸ್ತೆಯಲ್ಲಿ ದ್ವಿಚಕ್ರ ವಾಹನ ಬಿಡಿ. ನಾಲ್ಕು ಚಕ್ರದ ವಾಹನ ತಿರುಗಾಡುವುದು ಸಹ ಕಷ್ಟ. ಕಾಮಗಾರಿ ಪ್ರಗತಿಯಲ್ಲಿರುವ ಕುರಿತು ಎಲ್ಲಿಯೂ ನಾಮಫಲಕವಿಲ್ಲ, ಹಾಗೂ ಕಾಮಗಾರಿ ನಡೆಯುವ ಸ್ಥಳದಲ್ಲಿ ಒಂದು ಕಡೆ ಒಂದೇ ಒಂದು ಬ್ಯಾರಿಕೇಡ್ ಇದೆ ಬಿಟ್ಟರೆ ಮತ್ತೆ ಎಲ್ಲೂ ಯಾವುದೇ ಬ್ಯಾರಿಕೇಡ್ ಸಹ ಹಾಕದೇ ಇರುವುದು ವಿಪರ್ಯಾಸ.

ಸಂಬಂದಪಟ್ಟ ಇಲಾಖೆ ಹಾಗೂ ಕೆಲಸ ನಿರ್ವಹಿಸುತ್ತಿರುವ ಗುತ್ತಿಗೆದಾರರು ಗಮನಹರಿಸಿ ಈ ಕೂಡಲೇ ಸೂಕ್ತ ವ್ಯವಸ್ಥೆ ಕಲ್ಪಿಸಿ ಕೊಡಬೇಕಾಗಿ ಸ್ಥಳೀಯರಾದ ರವಿ ಮೊಗವೀರ ಗುಡ್ಡಟ್ಟು ಮನವಿ ಮಾಡಿದ್ದಾರೆ.


