ಮಂಗಳೂರು: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಮುಂಗಾರು ಅಬ್ಬರ ಮತ್ತಷ್ಟು ಜೋರಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನಲ್ಲಿ ನಡೆದ ಪ್ರತ್ಯೇಕ ಘಟನೆಯಲ್ಲಿ ಇಬ್ಬರು ಮೃತಪಟ್ಟ ಕುರಿತು ವರದಿಯಾಗಿದೆ.
ಮೃತರನ್ನು ದೇರಳಕಟ್ಟೆ ಕಾನಕೆರೆ ನಿವಾಸಿ ಫಾತಿಮ ನಯೀಮ (12) ಮತ್ತು ಮೊಂಟೆಪದವು ನಿವಾಸಿ ಪ್ರೇಮ ಪೂಜಾರಿ (58) ಎಂದು ಗುರುತಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಗುರುವಾರ ರಾತ್ರಿಯಿಂದ ಭಾರೀ ಮಳೆಯಾಗುತ್ತಿದ್ದು, ತಗ್ಗುಪ್ರದೇಶಗಳು ಜಲಾವೃತವಾಗಿದೆ. ರಾಜಕಾಲುವೆ ತುಂಬಿ ಹರಿಯುತ್ತಿದೆ. ಹಲವೆಡೆ ಗುಡ್ಡ ಪ್ರದೇಶ ಕುಸಿತವಾಗಿದೆ. ತೋಟಗಳಿಗೆ ನೀರು ನುಗ್ಗಿ ಅವಾಂತರವೇ ಸೃಷ್ಟಿಯಾಗಿದೆ. ನೂರಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿದೆ.
ದೇರಳಕಟ್ಟೆ ಕಾನಕೆರೆ ಬಳಿ ನೌಶದ್ ಎಂಬವರ ಮನೆಗೆ ತಡೆಗೋಡೆ ಕುಸಿದು ಫಾತಿಮಾ ನಯೀಮಾ ಮೃತಪಟ್ಟಿದ್ದಾಳೆ. ಮೊಂಟೆಪದವು ಬಳಿ ಗುಡ್ಡ ಕುಸಿದು 5 ಮಂದಿ ಸಿಲುಕಿದ್ದು, ಇವರಲ್ಲಿ ಕಾಂತಪ್ಪ ಪೂಜಾರಿ ಎಂಬವರ ಪತ್ನಿ ಪ್ರೇಮಾ ಪೂಜಾರಿ ಮೃತಪಟ್ಟಿದ್ದಾರೆ. ಕಾಂತಪ್ಪ ಪೂಜಾರಿಗೆ ಗಂಭೀರ ಗಾಯವಾಗಿದೆ. ಒಬ್ಬ ಮಹಿಳೆ ಮತ್ತು ಮೂವರು ಮಕ್ಕಳು ಮಣ್ಣಿನಡಿ ಸಿಲುಕಿದ್ದು, ರಕ್ಷಣಾ ಕಾರ್ಯ ನಡೆಯುತ್ತಿದೆ. ಸ್ಥಳಕ್ಕೆ ಎನ್ಡಿಆರ್ ಎಫ್ ತಂಡ ದೌಡಾಯಿಸಿದೆ. ಬಿರುಸಿನ ಮಳೆ ಮುಂದುವರಿದಿದ್ದು, ರಕ್ಷಣಾ ಕಾರ್ಯಕ್ಕೆ ಅಡ್ಡಿಯಾಗಿದೆ.

