ಉಡುಪಿ: ಇತ್ತೀಚಿಗೆ ನಿಧನರಾದ ರಾಕೇಶ್ ಪೂಜಾರಿ ಅವರ ನಿವಾಸಕ್ಕೆ ನಟ, ನಿರ್ದೇಶಕ ರಿಷಬ್ ಶೆಟ್ಟಿ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ.
ಕಿರುತೆರೆ ನಟ, ಹಾಸ್ಯ ಕಲಾವಿದ, ಪ್ರೇಕ್ಷಕರನ್ನು ನಕ್ಕು ನಲಿಸುತ್ತಿದ್ದ, ನಗುಮುಖದ ವ್ಯಕ್ತಿತ್ವ ರಾಕೇಶ್ ಪೂಜಾರಿ ನಿಧನಕ್ಕೆ ಆಪ್ತರು, ಸೆಲೆಬ್ರಿಟಿಗಳು ಕಣ್ಣೀರಿಟ್ಟಿದ್ದಾರೆ. ಅವರ ಕುಟುಂಬಕ್ಕೆ ಹಲವರು ಸಾಂತ್ವನ ಹೇಳಿದ್ದಾರೆ.
ಇದೀಗ ನಟ ಕಂ ನಿರ್ದೇಶಕ ರಿಷಬ್ ಶೆಟ್ಟಿ ಹಾಗೂ ಅವರ ಪತ್ನಿ ಪ್ರಗತಿ ಅವರು ರಾಕೇಶ್ ನಿವಾಸಕ್ಕೆ ಭೇಟಿ ನೀಡಿ, ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಉಡುಪಿಯ ಹೂಡೆಯಲ್ಲಿ ರಾಕೇಶ್ ನಿವಾಸಕ್ಕೆ ಭೇಟಿ ನೀಡಿ, ರಾಕೇಶ್ ಸಹೋದರಿ ಹಾಗೂ ತಾಯಿಯನ್ನು ಭೇಟಿಯಾಗಿದ್ದಾರೆ.
ರಾಕೇಶ್ ರಿಷಬ್ ಅವರ ‘ಕಾಂತಾರ: ಚಾಪ್ಟರ್ 1’ ನಲ್ಲಿ ನಟಿಸುತ್ತಿದ್ದರು. ಇತ್ತೀಚೆಗೆ ಅವರು ಸಿನಿಮಾದ ಶೂಟಿಂಗ್ ನಲ್ಲಿ ಭಾಗಿಯಾಗಿದ್ದರು.
ರಾಕೇಶ್ ನಿಧನರಾದಾಗ ರಿಷಬ್ ಅವರು ಅಂತಿಮ ದರ್ಶನ ಪಡೆಯಲು ಬರಲಿಲ್ಲ ಎನ್ನುವ ವಿಚಾರಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆ ಆಗಿತ್ತು. ಈಗ ಅವರು ರಾಕೇಶ್ ಕುಟುಂಬವನ್ನು ಭೇಟಿ ಆಗಿದ್ದು, ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.
ರಾಕೇಶ್ ನಿವಾಸಕ್ಕೆ ಭೇಟಿಯಾದ ರಿಷಬ್ ಕುಟುಂಬಕ್ಕೆ ಸಾಂತ್ವನ ಹೇಳುವುದರ ಜತೆ, ಅವರ ಜತೆ ನಿಲ್ಲುವುದಾಗಿ ಹೇಳಿದ್ದಾರೆ. ರಾಕೇಶ್ ತಂಗಿ ಮದುವೆಗೆ ಆರ್ಥಿಕ ಸಹಾಯ ಮಾಡುವುದಾಗಿ ಹೇಳಿದ್ದಾರೆ. ಮುಂದಿನ ದಿನದಲ್ಲಿ ನಿರ್ಮಾಣವಾಗುವ ರಾಕೇಶ್ನ ಪುತ್ಥಳಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿಯೂ ಭಾಗಿಯಾಗಿ ಸದಾಕಾಲ ಕುಟುಂಬದೊಂದಿಗೆ ನಾನಿದ್ದೇನೆ ಎನ್ನುವ ಭರವಸೆಯನ್ನೂ ರಿಷಬ್ ಶೆಟ್ಟಿ ನೀಡಿದ್ದಾರೆ ಎನ್ನಲಾಗಿದೆ.

