ಉಡುಪಿ: ಕ್ಯಾನ್ಸರ್ ರೋಗದಿಂದ ಬಳಲುತ್ತಿರುವ ಮಹಿಳೆಯನ್ನೂ ಬಿಡದ ಆನ್ಲೈನ್ ವಂಚಕರು ಸಹಾಯ ಮಾಡುವ ನೆಪದಲ್ಲಿ ಉಡುಪಿ ಮಠ, ಮಂತ್ರಾಲಯದ ಸ್ವಾಮೀಜಿ ಹೆಸರನ್ನು ದುರ್ಬಳಕೆ ಮಾಡಿಕೊಂಡಿರುವ ಘಟನೆ ನಡೆದಿದ್ದು ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕ್ಯಾನ್ಸರ್ ನಿಂದ ಬಳಲುತ್ತಿರುವ ಭಾಗ್ಯಶ್ರೀ ಅವರು ಚಿಕಿತ್ಸಾ ವೆಚ್ಚಕ್ಕೆ ಹಣಕಾಸು ನಿರ್ವಹಣೆಗಾಗಿ ವಾಟ್ಸಾಪ್ ಮತ್ತು ಫೇಸ್ಬುಕ್ ನಲ್ಲಿ ಮನವಿ ಮಾಡಿಕೊಂಡಿದ್ದರು. ಅಪರಿಚಿತನೋರ್ವ ಕರೆ ಮಾಡಿ ಕನ್ನಡದಲ್ಲಿ ಮಾತನಾಡಿ ನಾನು ಮಂತ್ರಾಲಯ ರಾಘವೇಂದ್ರ ಸ್ವಾಮೀಜಿ ಮಠದಿಂದ ಸ್ವಾಮೀಜಿ ಮಾತನಾಡುತ್ತಿದ್ದೇನೆ ಎಂದು ಹೇಳಿ ಉಡುಪಿ ಕೃಷ್ಣ ಮಠದಿಂದ ಧನಸಹಾಯ ಮಾಡಲು ತಿಳಿಸಿದ್ದು ಮಹಿಳೆಗೆ ಎರಡು ಲಕ್ಷದ ತೊಂಭತ್ತು ಸಾವಿರ ರೂ ನೀಡುವುದಾಗಿ ಆದರೆ ಅದಕ್ಕೆ ತೆರಿಗೆಯಾಗಿ ಇಪ್ಪತ್ತೊಂಭತ್ತು ಸಾವಿರದ ಒಂಭೈನೂರು ರೂ. ಪಾವತಿಸಬೇಕೆಂದು ಸೂಚಿಸಿದ್ದ.
ಉಡುಪಿ, ಮಂತ್ರಾಲಯದ ಹೆಸರು ಬಂದಿದ್ದರಿಂದ ಮಹಿಳೆ ನಂಬಿ ಆತ ಹೇಳಿದಷ್ಟು ಹಣ ಕಳುಹಿಸಿದ್ದಾರೆ. ನಂತರ ಆತನ ನಂಬರಿಗೆ ಎಷ್ಟು ಬಾರಿ ಕರೆ ಮಾಡಿದರೂ ಕರೆ ಹೋಗುತ್ತಿಲ್ಲ ಇದು ವಂಚನೆ ಎಂದು ಅರಿವಿಗೆ ಬಂದ ಮೇಲೆ ಮಹಿಳೆ ಪೊಲೀಸರ ಮೊರೆ ಹೋಗಿದ್ದಾರೆ.

