ಕಲಬುರಗಿ: ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ ಇರುವಂತಹ ಜನೌಷಧಿ ಕೇಂದ್ರವನ್ನು ಸ್ಥಗಿತಗೊಳಿಸುವಂತೆ ಇತ್ತೀಚೆಗೆ ರಾಜ್ಯ ಸರ್ಕಾರ ಆದೇಶಿಸಿತ್ತು. ಇದೀಗ ಈ ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.
ರಾಜ್ಯ ಸರ್ಕಾರದ ಈ ಆದೇಶವನ್ನು ಪ್ರಶ್ನೆ ಮಾಡಿ ಕಲ್ಬುರ್ಗಿ ಹೈಕೋರ್ಟ್ ಗೆ 16 ಅರ್ಜಿಗಳು ಸಲ್ಲಿಕೆಯಾಗಿದ್ದವು. 16 ಅರ್ಜಿದಾರರಿಗೆ ಸಂಬಂಧಿಸಿದಂತೆ ಹೈಕೋರ್ಟ್ ವಿಚಾರಣೆ ನಡೆಸಿ ಮಧ್ಯಂತರ ತಡೆ ನೀಡಿ ಆದೇಶ ಹೊರಡಿಸಿದೆ.
ಜನೌಷಧಿ ಕೇಂದ್ರಗಳಲ್ಲಿ ಜನರಿಗೆ 50% ರಿಂದ 96% ರಿಯಾಯಿತಿ ದರದಲ್ಲಿ ಔಷಧ ನೀಡಲಾಗುತ್ತಿತ್ತು. ಆದರೆ ಸರ್ಕಾರದ ಆದೇಶದಿಂದ ಜನಸಾಮಾನ್ಯರ ಮೂಲಭೂತ ಹಕ್ಕಿಗೆ ಧಕ್ಕೆಯಾಗಿದೆ ಎಂದು ಅರ್ಜಿದಾರರ ಪರ ವಾದಿಸಲಾಗಿದೆ.
ಈ ವೇಳೆ ಮುಂದಿನ ವಿಚಾರಣೆಯವರೆಗೆ ಜನೌಷಧ ಕೇಂದ್ರ ಸ್ಥಗಿತ ಮಾಡುವುದು ಬೇಡ ಎಂದು ರಾಜ್ಯ ಸರ್ಕಾರದ ಆದೇಶಕ್ಕೆ ಹೈಕೋರ್ಟ್ ಪೀಠ ಮಧ್ಯಂತರ ತಡೆ ನೀಡಿ ಆದೇಶ ಹೊರಡಿಸಿದೆ.


