ಉಡುಪಿ: ನಗರದ ಕರಾವಳಿ ಬೈಪಾಸ್ ಬಳಿ ಪೊಲೀಸ್ ಕರ್ತವ್ಯಕ್ಕೆ ಅಡ್ಡಿಪಡಿಸಿದ ವ್ಯಕ್ತಿಯ ಮೇಲೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಚಾರ ಠಾಣೆಯ ಪೊಲೀಸ್ ನಿರೀಕ್ಷಕ ಹುಸೇನಸಾಬ ಕಾಶಿಮಸಾಬ ಚಪ್ಪರಕರ ಅವರು ಕರಾವಳಿ ಬೈಪಾಸ್ ಬಳಿ ಸಿಬಂದಿ ಜತೆ ವಾಹನ ತಪಾಸಣೆ ಮಾಡುತ್ತಿರುವಾಗ ಅಂಬಲಪಾಡಿ ಕಡೆಯಿಂದ ಕರಾವಳಿ ಜಂಕ್ಷನ್ ಕಡೆಗೆ ಆಮ್ನಿ ಕಾರಿನ ಚಾಲಕ ಸೀಟ್ ಬೆಲ್ಟ್ ಧರಿಸದೇ ಕಾರನ್ನು ಚಲಾಯಿಸಿಕೊಂಡು ಬರುತ್ತಿರುವುದನ್ನು ಕಂಡು ಕಾರನ್ನು ನಿಲ್ಲಿಸಲು ತಿಳಿಸಿದ್ದಾರೆ.
ಕಾರನ್ನು ನಿಲ್ಲಿಸಿದ ಬಳಿಕ ವಾಹನ ಚಾಲನ ಪ್ರಮಾಣ ಪತ್ರವನ್ನು ತೋರಿಸುವಂತೆ ಹೇಳಿದಾಗ ಚಾಲಕನು ಏರು ಧ್ವನಿಯಲ್ಲಿ ‘ನಾನು ಯಾವುದೇ ದಾಖಲೆ ನೀಡುವುದಿಲ್ಲ’ ಎಂದು ಹೇಳಿದ್ದಲ್ಲದೇ ಕಾರನ್ನು ಚಲಾಯಿಸಲು ಮುಂದಾದಾಗ ಪೊಲೀಸರು ವಾಹನವನ್ನು ನಿಲ್ಲಿಸಿದ್ದಾರೆ. ಅನಂತರ ಚಾಲಕನ ವಾಹನ ಚಾಲನಾ ಪ್ರಮಾಣ ಪತ್ರ ದಾಖಲಾತಿ ನೋಡಿದಾಗ ಚಾಲಕನ ಹೆಸರು ಕುರಿಯನ್ ಎಂಬುದಾಗಿತ್ತು. ಈ ಕಾರಣಕ್ಕಾಗಿ ಆತನಿಗೆ ದ್ವಿಪ್ರತಿಯಲ್ಲಿ ಸಹಿಮಾಡುವಂತೆ ನೋಟಿಸ್ ನೀಡಿದಾಗ ನಾನು ಸಹಿ ಮಾಡುವುದಿಲ್ಲ ಎಂದು ಪೊಲೀಸರ ಕೈಯಲ್ಲಿದ್ದ ವಾಹನ ಚಾಲನ ಪ್ರಮಾಣಪತ್ರವನ್ನು ಕಿತ್ತುಕೊಳ್ಳಲು ಹಠಾತ್ ದಾಳಿ ಮಾಡಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾನೆ ಎನ್ನಲಾಗಿದೆ. ಈ ಬಗ್ಗೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

