ಮಂಗಳೂರು: ಗಸ್ತು ಕರ್ತವ್ಯದಲ್ಲಿದ್ದ ಕಂಕನಾಡಿ ನಗರ ಠಾಣೆ ಎಎಸ್ಐ ಅಶೋಕ್ ಕೆ. ಮತ್ತು ಸಿಬಂದಿ ಸುರೇಂದ್ರ ಕುಮಾರ್ ಅವರಿಗೆ ವ್ಯಕ್ತಿಯೊಬ್ಬ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿರುವ ಆರೋಪಿಯನ್ನು ಬಂಧಿಸಲಾಗಿದೆ.
ಬಂಧಿತ ಆರೋಪಿಯನ್ನು ಹಾಸನ ಜಿಲ್ಲೆ ಸಕಲೇಶಪುರದ ಹಲಸೋಗೆ ಗ್ರಾಮದ ನಿವಾಸಿ ಸುಲೈಮಾನ್ (42) ಎಂದು ಗುರುತಿಸಲಾಗಿದೆ.
ಸೆ. 2ರಂದು ರಾತ್ರಿ 12.45ರ ವೇಳೆಗೆ ನಾಗುರಿಯ ಓಣಿಯೊಂದರಲ್ಲಿ ಐದಾರು ದ್ವಿಚಕ್ರ ವಾಹನಗಳನ್ನು ನಿಲ್ಲಿಸಿ ಏಳೆಂಟು ಮಂದಿ ನಿಂತಿದ್ದರು. ಕರ್ತವ್ಯದಲ್ಲಿದ್ದ ಪೊಲೀಸರು ಅವರನ್ನು ವಿಚಾರಿಸಿದಾಗ ಸುಲೈಮಾನ್ ಎಂಬಾತನು, “ನಮ್ಮನ್ನು ಕೇಳಲು ನೀವು ಯಾರು? ನಾನು ಏನು ಬೇಕಾದರೂ ಮಾಡಿಯೇನು, ನಿನ್ನನ್ನು ಬಿಡುವುದಿಲ್ಲ’ ಎನ್ನುತ್ತ ಅಶೋಕ್ ಅವರ ಮೇಲೆ ಕೈಯಿಂದ ಹಲ್ಲೆ ನಡೆಸಲು ಮುಂದಾದನು. ಅವರು ತಪ್ಪಿಸಿಕೊಂಡರು.
ಆರೋಪಿಯು ಅವರ ಕೈಯಲ್ಲಿದ್ದ ಮೊಬೈಲ್ಗೆ ಅಳವಡಿಸಿದ್ದ ಫಿಂಗರ್ ಪ್ರಿಂಟ್ ಸ್ಕ್ಯಾನರನ್ನು ಹಿಡಿದು ಎಳೆದು ತುಂಡು ಮಾಡಿ ನೆಲಕ್ಕೆ ಎಸೆದನು. ಇದನ್ನು ನೋಡಿದ ವಾಹನ ಚಾಲಕ ಸುರೇಂದ್ರ ಕುಮಾರ್ ಸಮಾಧಾನ ಪಡಿಸಲು ಮುಂದಾದಾಗ ಅವರ ಹೊಟ್ಟೆ ಮತ್ತು ಸೊಂಟಕ್ಕೆ ಕಾಲಿನಿಂದ ಒದ್ದು ನೆಲಕ್ಕೆ ಬೀಳಿಸಿ ಬೆನ್ನು ಮತ್ತು ಕುತ್ತಿಗೆಗೆ ಕೈಯಿಂದ ಹಲ್ಲೆ ಮಾಡಿದನು. ಅಷ್ಟರಲ್ಲಿ ಅಶೋಕ್ ಅವರು ಆರೋಪಿಯಿಂದ ಸಹೋದ್ಯೋಗಿಯನ್ನು ಬಿಡಿಸಿದರು. ಆರೋಪಿಯನ್ನು ಹಿಡಿದಿಟ್ಟು ಠಾಣೆಗೆ ಕರೆ ಮಾಡಿ ಸಹೋದ್ಯೋಗಿಗಳಾದ ರಾಯಣ್ಣ ಮತ್ತು ಪುರುಷೋತ್ತಮ ಅವರನ್ನು ಕರೆಸಿಕೊಂಡು ಅವರ ನೆರವಿನೊಂದಿಗೆ ಠಾಣೆಗೆ ಕರೆತಂದರು.
ಸಾರ್ವಜನಿಕ ಸ್ಥಳದಲ್ಲಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿ, ಹಲ್ಲೆ ನಡೆಸಿ – ಜೀವ ಬೆದರಿಕೆ ಒಡ್ಡಿ ಇಲಾಖಾ ಸೊತ್ತನ್ನು ಹಾಳುಗೆಡವಿ ಸರಕಾರಕ್ಕೆ ನಷ್ಟ ಉಂಟು ಮಾಡಿದ ಹಿನ್ನೆಲೆಯಲ್ಲಿ ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

