ಮೂಡುಬಿದಿರೆ: ನಿಡ್ಡೋಡಿ-ಕಟೀಲು ರಸ್ತೆಯಲ್ಲಿ 10 ವರ್ಷಗಳ ಹಿಂದೆ ಬಸ್ ಢಿಕ್ಕಿಯಾಗಿ ಬೈಕ್ ಸವಾರ ಸಾವಿಗೀಡಾದ ಪ್ರಕರಣದಲ್ಲಿ ಆರೋಪಿ ಬಸ್ ಚಾಲಕ ಶ್ರೀನಿವಾಸ ಆರ್.ಎಂ. ಅವರಿಗೆ ಮೂಡುಬಿದಿರೆ ಸಿ.ಜೆ. ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯದ ನ್ಯಾಯಾಧೀಶೆ ಕಾವೇರಮ್ಮ ಅವರು ಶಿಕ್ಷೆ ವಿಧಿಸಿದ್ದಾರೆ.
ಭಾ.ದಂ.ಸಂಹಿತೆ ಕಲಂ 279ರನ್ವಯ 6 ತಿಂಗಳ ಸಾದಾ ಕಾರಾಗೃಹವಾಸ ಮತ್ತು 500 ರೂ. ಜುಲ್ಮಾನೆ, ದಂಡ ಪಾವತಿಸಲು ತಪ್ಪಿದಲ್ಲಿ 7 ದಿನ ಸಾದಾ ಕಾರಾಗೃಹವಾಸ, ಭಾ.ದಂ.ಸಂಹಿತೆ 338ರನ್ವಯ 2 ವರ್ಷ ಸಾದಾ ಕಾರಾಗೃಹ ವಾಸ ಮತ್ತು 500 ರೂ. ಜುಲ್ಮಾನೆ, ದಂಡ ತೆರಲು ತಪ್ಪಿದಲ್ಲಿ 7 ದಿನಗಳ ಸಾದಾ ಕಾರಾಗೃಹ ವಾಸ ಮತ್ತು ಭಾ.ದಂ.ಸಂ. 304 (ಎ) ಪ್ರಕಾರ 2 ವರ್ಷಗಳ ಸಾದಾ ಕಾರಾಗೃಹ ವಾಸ ಮತ್ತು 5,000 ರೂ. ಜುಲ್ಮಾನೆ, ದಂಡ ತೆರಲು ತಪ್ಪಿದಲ್ಲಿ 30 ದಿನಗಳ ಸಾದಾ ಕಾರಾಗೃಹ ವಾಸ ಈ ಮೂರೂ ಶಿಕ್ಷೆಗಳನ್ನು ಆರೋಪಿಯು ಏಕಕಾಲದಲ್ಲಿ ಅನುಭವಿಸಬೇಕು ಎಂದು ತೀರ್ಪು ನೀಡಿದ್ದಾರೆ.
2015ರ ಡಿ. 30ರಂದು ಅಪರಾಹ್ನ ಕಟೀಲಿನಿಂದ ನಿಡ್ಡೋಡಿಯತ್ತ ಬರುತ್ತಿದ್ದ ಬೈಕಿಗೆ ನಿಡ್ಡೋಡಿ ಕಡೆಯಿಂದ ಕಟೀಲಿನತ್ತ ಸಾಗುತ್ತಿದ್ದ ಬಸ್ ನಿಡ್ಡೋಡಿ ಗ್ರಾಮದ ಕಲ್ಲಕುಮೇರಿನಲ್ಲಿ ಢಿಕ್ಕಿ ಹೊಡೆದಿತ್ತು. ಚಾಲಕ ಶ್ರೀನಿವಾಸ ಅವರು ಬಸ್ಸನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿದ್ದೇ ದುರ್ಘಟನೆಗೆ ಕಾರಣವೆನ್ನಲಾಗಿದೆ. ಬೈಕ್ ಸವಾರ ಮುರಳೀಧರ ಬೆಳಿರಾಯರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು ಸಹಸವಾರ ಲಕ್ಷ್ಮೀನಾರಾಯಣ ಜೆನ್ನಿ ಗಂಭೀರ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದರು.
ಪೊಲೀಸ್ ನಿರೀಕ್ಷಕ ಅನಂತಪದ್ಮನಾಭ ತನಿಖೆ ನಡೆಸಿ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಸರಕಾರಿ ಅಭಿಯೋಜಕರಾದ ಶೋಭಾ ಎಸ್. ಅವರು ಸಾಕ್ಷಿದಾರರ ವಿಚಾರಣೆ ನಡೆಸಿ ವಾದ ಮಂಡಿಸಿದ್ದರು.

