ಉಡುಪಿ : ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಸಲಹೆಯಂತೆ ಭಗವದ್ಗೀತೆ ಬರೆದು 36 ದಿನಗಳಲ್ಲೇ ಜೈಲಿನಿಂದ ಹೊರಬಂದೆ ಎಂದು ಮಾಜಿ ಸಚಿವ ಜನಾರ್ದನ ರೆಡ್ಡಿ ನುಡಿದರು.

ಅವರು ಉಡುಪಿ ಶ್ರೀ ಕೃಷ್ಣ ಮಠಕ್ಕೆ ಆಗಮಿಸಿ, ಶ್ರೀಕೃಷ್ಣ- ಮುಖ್ಯಪ್ರಾಣ ದೇವರ ದರ್ಶನ ಪಡೆದ ಬಳಿಕ ಗೀತಾ ಮಂದಿರದಲ್ಲಿ ಪರ್ಯಾಯ ಪುತ್ತಿಗೆ ಶ್ರೀಗಳಿಗೆ ಕೋಟಿ ಗೀತಾ ಲೇಖನ ಪುಸ್ತಕ ಸಮರ್ಪಣೆ ಮಾಡಿದರು.

ಮೇ ತಿಂಗಳ 6ನೇ ದಿನಾಂಕದಂದು ನ್ಯಾಯಾಲಯದ ತೀರ್ಪಿಗೆ ಅನುಸಾರವಾಗಿ ಸೆರೆಮನೆ ವಾಸ ಅನುಭವಿಸಿದ್ದು, ಆ ಸಂದರ್ಭದಲ್ಲಿ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಸಲಹೆಯಂತೆ ಜೈಲಿನಲ್ಲಿದ್ದಾಗಲೇ ಭಗವದ್ಗೀತೆಯ 18 ಅಧ್ಯಾಯಗಳನ್ನು 36 ದಿನಗಳಲ್ಲಿ ಬರೆದು ಪೂರ್ಣಗೊಳಿಸಿದ್ದೆ. ಗೀತಾ ಲೇಖನ ಪೂರ್ಣಗೊಂಡ ದಿನವೇ ಜೈಲಿನಿಂದ ಹೊರಬಂದೆ’ ಎಂದು ರೆಡ್ಡಿ ಶ್ರೀಗಳಿಗೆ ಸಮರ್ಪಿಸಿದ ಗೀತಾ ಲೇಖನ ಪುಸ್ತಕದಲ್ಲಿ ಬರೆದಿದ್ದಾರೆ. ಗೀತಾ ಲೇಖನದಿಂದ ಕೃಷ್ಣನ ಅನುಗ್ರಹ ಲಭಿಸಿತು ಎಂದೂ ಅವರು ತಿಳಿಸಿದ್ದಾರೆ.


