ಬಂಟ್ವಾಳ: ಹೋಟೆಲ್ ಬಳಿ ಶೌಚಾಲಯಕ್ಕೆ ತೆರಳಿದ್ದ ವೇಳೆ ಬಸ್ನಲ್ಲಿಟ್ಟಿದ್ದ ಬ್ಯಾಗ್ನಿಂದ 14 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವಾದ ಘಟನೆ ಬಂಟ್ವಾಳ ತಾಲೂಕು ಬಾಳ್ತಿಲ ಗ್ರಾಮದ ಕುದ್ರೆಬೆಟ್ಟು ಬಳಿ ನಡೆದಿದೆ.
ಈ ಕುರಿತು ಬ್ರಹ್ಮಾವರ ತಾಲೂಕಿನ ವಾಸುದೇವ ಸೂರ್ಯ ಎಂಬವರು ದೂರು ನೀಡಿದ್ದು, ಪತ್ನಿ ಜತೆ ಬೆಂಗಳೂರಿನಲ್ಲಿ ಸಂಬಂಧಿಕರ ಮದುವೆ ಕಾರ್ಯಕ್ಕೆಂದು ಬಸ್ನಲ್ಲಿ ಬುಧವಾರ ಪ್ರಯಾಣಿಸುತ್ತಿರುವ ವೇಳೆ ಘಟನೆ ನಡೆದಿದೆ ಎಂದು ತಿಳಿಸಿದ್ದಾರೆ.
ಬ್ರಹ್ಮಾವರದಿಂದ ರಾತ್ರಿ 9 ಗಂಟೆಗೆ ಬೆಂಗಳೂರಿಗೆ ಹೋಗುವ ಖಾಸಗಿ ಬಸ್ನಲ್ಲಿ ಪ್ರಯಾಣಿಸಿದ್ದು, ಬಂಟ್ವಾಳ ತಾಲೂಕು ಬಾಳ್ತಿಲ ಗ್ರಾಮದ ಕುದ್ರೆಬೆಟ್ಟು ಖಾಸಗಿ ಹೋಟೆಲ್ ಬಳಿ ಬಸ್ ನಿಲ್ಲಿಸಲಾಗಿತ್ತು. ಆ ಸಂದರ್ಭ, ಬಸ್ನಿಂದ ಇಳಿದು ಶೌಚಾಲಯಕ್ಕೆ ಹೋಗಿ ವಾಪಸ್ ಬಂದಾಗ ಬ್ಯಾಗ್ನಲ್ಲಿದ್ದ ವಸ್ತುಗಳು ಚೆಲ್ಲಾಪಿಲ್ಲಿಯಾಗಿತ್ತು.
ಪರ್ಸ್ನಲ್ಲಿ ಇದ್ದ ಚಿನ್ನಾಭರಣಗಳು ಕಾಣೆಯಾಗಿತ್ತು. ಯಾರೋ ಕಳ್ಳರು ಚಿನ್ನಾಭರಣಗಳನ್ನು ಕಳವು ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
