ಉಡುಪಿ : ಉಡುಪಿ ಜಿಲ್ಲೆಯ ಕೋಟ ಪೊಲೀಸ್ ಠಾಣಾ ವ್ಯಾಪ್ತಿಯ ಪಡುಕೆರೆಯಲ್ಲಿ ನಡೆದ ಗಂಭೀರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.




ದಿನಾಂಕ 14-12-2025ರಂದು ಸಂಜೆ ಸಂತೋಷ್ ಪೂಜಾರಿ ಸೇರಿದಂತೆ ಆರು ಮಂದಿ ಬಾರ್ನಲ್ಲಿ ಪಾರ್ಟಿ ಮುಗಿಸಿ ಪಡುಕೆರೆಯ ಸರ್ಕಲ್ ಬಳಿ ಊಟ ಮಾಡಿಕೊಂಡು ಮಾತನಾಡುತ್ತಿದ್ದರು. ಈ ವೇಳೆ ಸಂತೋಷನ ಕುಟುಂಬದ ವಿಚಾರ ಹಾಗೂ ಮದ್ಯಪಾನದ ಬಗ್ಗೆ ಮಾತುಕತೆ ನಡೆದು ದರ್ಶನ್, ಕೌಶಿಕ್, ಅಂಕಿತ ಮತ್ತು ಸುಜನ್ ನಡುವೆ ಜಗಳ ಉಂಟಾಗಿದೆ.
ಜಗಳ ತೀವ್ರಗೊಂಡು ನಾಲ್ವರು ಸೇರಿ ಸಂತೋಷ್ ಮೇಲೆ ಹಲ್ಲೆ ನಡೆಸಿದ್ದಾರೆ. ದರ್ಶನ್ ಸಂತೋಷನ ಕುತ್ತಿಗೆಯ ಹಿಂಬದಿ ಬಲವಾಗಿ ಹೊಡೆದಿದ್ದು, ಕೌಶಿಕ್ ಕೈಯಿಂದ ಹಲ್ಲೆ ಮಾಡಿದ್ದಾನೆ. ಜಗಳ ಬಿಡಿಸಲು ರಜತ್ ಮಧ್ಯ ಪ್ರವೇಶಿಸಿದ್ದರೂ, ಹಲ್ಲೆಯಿಂದ ಸಂತೋಷ್ ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ಬಾಯಿಯಿಂದ ನೊರೆ ಬರುತ್ತಿದ್ದು ಮಾತನಾಡಲು ಸಾಧ್ಯವಾಗಿರಲಿಲ್ಲ.
ತಕ್ಷಣ ಸಂತೋಷನನ್ನು ಕಾರಿನಲ್ಲಿ ಬ್ರಹ್ಮಾವರದ ಮಹೇಶ್ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ವೈದ್ಯರು ಈಗಾಗಲೇ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.
ಈ ಕುರಿತು ನೀಡಲಾದ ದೂರಿನ ಮೇರೆಗೆ ಕೋಟ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 218/2025ರಂತೆ BNS ಕಲಂ 103, 115(2), 352 ಜೊತೆಗೆ 3(5) ಅಡಿ ಪ್ರಕರಣ ದಾಖಲಾಗಿದೆ.
ಈ ಪ್ರಕರಣದ ಆರೋಪಿಗಳಾದ ದರ್ಶನ್ (21), ಕೌಶಿಕ್ ಜೋಗಿ (21), ಅಂಕಿತ (19) ಮತ್ತು ಸುಜನ್ (21)ರನ್ನು ದಸ್ತಗಿರಿ ಮಾಡಲಾಗಿದ್ದು, ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ.

