ಉಡುಪಿ: ಅಕ್ಷತಾ ಪೂಜಾರಿ ಮೇಲಿನ ಪೊಲೀಸರ ದೌರ್ಜನ್ಯ ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ ಬಿಲ್ಲವ ಮುಖಂಡರನ್ನು ಟಾರ್ಗೆಟ್ ಮಾಡುತ್ತಿರುವ ಪೊಲೀಸರ ಕ್ರಮದ ವಿರುದ್ಧ ಬಿಲ್ಲವ ಮುಖಂಡರು ಉಡುಪಿ ಬನ್ನಂಜೆ ಸಭಾಂಗಣದಲ್ಲಿ ಸಭೆ ಸೇರಿ ಚರ್ಚೆ ನಡೆಸಿದರು.
ಗೃಹ ಸಚಿವರನ್ನು ಭೇಟಿಯಾಗಿ ಪ್ರಕರಣ ಸಂಪೂರ್ಣ ಮಾಹಿತಿ ನೀಡಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಅಕ್ಷತಾ ಪೂಜಾರಿಗೆ ನ್ಯಾಯ ದೊರಕಿಸಿಕೊಡುವುದು ಹಾಗೂ ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆಯ ಅಧ್ಯಕ್ಷ ಪ್ರವೀಣ್ ಎಸ್ ಪೂಜಾರಿ ಸಹಿತ ಮುಖಂಡ ಮೇಲೆ ಕೇಸು ದಾಖಲು ಮಾಡಿರುವ ಕುರಿತಂತೆ ಮುಂದಿನ ದಿನಗಳಲ್ಲಿ ದೊಡ್ಡಮಟ್ಟದ ಹೋರಾಟ ಮಾಡಬೇಕೆಂದು ತೀರ್ಮಾನ ಕೈಗೊಳ್ಳಲಾಯಿತು.
ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆಯ ಅಧ್ಯಕ್ಷ ಪ್ರವೀಣ್ ಎಸ್ ಪೂಜಾರಿ ಮಾತನಾಡಿ, ಅಕ್ಷತಾ ಪೂಜಾರಿ ಮೇಲಿನ ಪೊಲೀಸ್ ದೌರ್ಜನ್ಯ ಪ್ರಕರಣವನ್ನು ಕಾರ್ಕಳ ಶಾಸಕ ಸುನಿಲ್ ಕುಮಾರ್ ಅವರು ಅಧಿವೇಶನದಲ್ಲಿ ಪ್ರಸ್ತಾಪಿಸಿದ್ದಾರೆ. ಆದರೆ ಜಿಲ್ಲಾ ಉಸ್ತುವಾರಿ ಸಚಿವರು ಈವರೆಗೂ ಈ ಕುರಿತು ಯಾವುದೇ ಹೇಳಿಕೆಯನ್ನು ಕೊಟ್ಟಿಲ್ಲ. ಇದು ಬಹಳ ಬೇಸರದ ಸಂಗತಿ. ಒಂದು ಬಡ ಹೆಣ್ಣುಮಗಳಿಗೆ ಆಗಿರುವ ಅನ್ಯಾಯಕ್ಕೆ ಮಹಿಳಾ ಸಚಿವರು ಪ್ರತಿಕ್ರಿಯೆ ನೀಡದಿರುವುದು ಬಿಲ್ಲವ ಸಮಾಜಕ್ಕೆ ಬಹಳ ಬೇಸರ ತಂದಿದೆ ಎಂದು ಹೇಳಿದರು.
ಹೀಗಾಗಿ ಬಿಲ್ಲವ ಸಮಾಜ ಮುಖಂಡರ ಜೊತೆಗೂಡಿ ಉಡುಪಿ ಶಾಸಕರನ್ನು ಸಂಪರ್ಕಿಸಿ ಅವರ ಮೂಲಕ ಗೃಹ ಸಚಿವರನ್ನು ಭೇಟಿ ಮಾಡಿ ಅಕ್ಷತಾ ಪೂಜಾರಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಮನವಿ ನೀಡುತ್ತೇವೆ. ಅಲ್ಲದೆ, ಪ್ರಕರಣದ ತನಿಖೆಯನ್ನು ನಿಷ್ಪಕ್ಷಪಾತವಾಗಿ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕೆಂದು ಆಗ್ರಹಿಸುತ್ತೇವೆ ಎಂದು ತಿಳಿಸಿದರು.
ಸಂತ್ರಸ್ತೆ ಅಕ್ಷತಾ ಪೂಜಾರಿ ಮಾತನಾಡಿ, ಪೊಲೀಸರು ದೌರ್ಜನ್ಯ ನಡೆಸಿರುವ ಪ್ರಕರಣದಲ್ಲಿ ಕೊನೆಯವರೆಗೂ ಹೋರಾಡುತ್ತೇನೆ. ನನ್ನ ಭವಿಷ್ಯಕ್ಕೆ ತೊಂದರೆ ಆಗುತ್ತದೆಂದು ಹೋರಾಟ ಅರ್ಧಕ್ಕೆ ನಿಲ್ಲಿಸುವುದಿಲ್ಲ. ನನಗೆ ನ್ಯಾಯ ಸಿಗಲೇ ಬೇಕು. ತಪ್ಪಿತಸ್ಥರಿಗೆ ಶಿಕ್ಷೆ ಆಗಲೇ ಬೇಕು ಎಂದು ಆಗ್ರಹಿಸಿದರು.
ಎಲ್ಲರೂ ನನ್ನ ಜೊತೆ ಇದ್ದಾರೆ. ನನಗೆ ಧೈರ್ಯ ಇದೆ. ಕೊನೆಯವರೆಗೂ ಹೋರಾಡ್ತೇನೆ. ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ನನಗೆ ಬೆಂಬಲ ನೀಡಬೇಕೆಂದು ವಿನಂತಿಸುತ್ತೇನೆ. ನನ್ನ ಶಿಕ್ಷಣಕ್ಕೂ ಸ್ವಲ್ಪ ತೊಂದರೆ ಆಗಬಹುದು. ಆದರೂ ಹೋರಾಟದಿಂದ ಹಿಂದೆ ಸರಿಯುವ ಮಾತೇ ಇಲ್ಲ. ಕೊನೆಯವರೆಗೂ ಹೋರಾಡ್ತೇನೆ ಎಂದರು.
