ಮಲ್ಪೆ: ಬಂದರಿನಲ್ಲಿ ಮೀನು ವ್ಯಾಪಾರಕ್ಕೆ ಬಂದಿದ್ದ ವ್ಯಕ್ತಿಯನ್ನು ಮೀನಿನ ಬಗ್ಗೆ ವಿಚಾರಿಸುವ ನೆಪದಲ್ಲಿ ಕಣ್ಣಿಗೆ ಖಾರದ ಪುಡಿ ಎರಚಿ ಆರು ಪವನ್ ಚಿನ್ನದ ಸರ ಸುಲಿಗೆ ನಡೆಸಿದ ಘಟನೆ ಇಂದು ಬೆಳ್ಳಂಬೆಳಗ್ಗೆ ಮಲ್ಪೆ ಬಂದರಿನಲ್ಲಿ ನಡೆದಿದೆ.
ಮಲ್ಪೆಯ ಬಡಾನಿಡಿಯೂರು ಗ್ರಾಮದ ದಯಾನಂದ ಕುಂದರ್ ಮಲ್ಪೆ ಬಂದರಿನಲ್ಲಿ ಮೀನು ವ್ಯಾಪಾರ ಮಾಡಿಕೊಂಡಿದ್ದು, ಇಂದು ಬೆಳಿಗ್ಗೆ 4.30 ರ ಹೊತ್ತಿಗೆ ಮಲ್ಪೆ ಬಂದರಿನ ಸಾಹುಕಾರ್ ಬಾರ್ ಬಳಿಯಿರುವ ಶೌಚಾಲಯಕ್ಕೆ ಹೋಗಿ ವಾಪಸ್ ಬರುವಾಗ ಒಬ್ಬನು ಮೀನಿನ ಬಗ್ಗೆ ವಿಚಾರಿಸಿದ್ದಾನೆ. ನಂತರ ಅವರ ಮುಖಕ್ಕೆ ಖಾರದ ಪುಡಿ ಎರಚಿ ಸ್ವಲ್ಪ ದೂರ ಎಳೆದುಕೊಂಡು ಹೋಗಿದ್ದು ನಂತರ ಇನ್ನಿಬ್ಬರು ಸೇರಿ ಚಾಕು ತೋರಿಸಿ ಹಲ್ಲೆ ಮಾಡಿ ಅಂದಾಜು ಆರು ಲಕ್ಷ ಮೌಲ್ಯದ ಆರು ಪವನ್ ಚಿನ್ನದ ಸರವನ್ನು ಸುಲಿಗೆ ಮಾಡಿ ಪರಾರಿಯಾಗಿದ್ದಾರೆ. ಅಲ್ಲದೆ ಕೊಲೆ ಬೆದರಿಕೆ ಕೂಡ ಹಾಕಿರುತ್ತಾರೆ.
ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯ ಅಪರಾಧ ಕ್ರಮಾಂಕ 20/2026 ರಂತೆ ಪ್ರಕರಣ ದಾಖಲಾಗಿದೆ.

