ಪಾಣೆಮಂಗಳೂರು ಎಂಬಲ್ಲಿ ಎರಡು ಬೈಕ್ ಗಳ ನಡುವೆ ನಡೆದ ಅಪಘಾತದಲ್ಲಿ ಯುವ ಛಾಯಾಗ್ರಾಹಕ ಸಾವನ್ನಪ್ಪಿದ ಘಟನೆ ನಡೆದಿದೆ.
ಮೃತರನ್ನು ಶಂಭೂರು ನಿವಾಸಿ ರಕ್ಷಿತ್ ಶೆಟ್ಟಿ (43) ಎಂದು ಗುರುತಿಸಲಾಗಿದೆ.
ರಾತ್ರಿ ಪಾಣೆಮಂಗಳೂರು ಎಂಬಲ್ಲಿ ಎರಡು ಬೈಕ್ಗಳ ನಡುವೆ ಅಪಘಾತ ನಡೆದಿದ್ದು, ಗಂಭೀರವಾಗಿ ಗಾಯಗೊಂಡಿದ್ದವರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟ ಬಗ್ಗೆ ಪೋಲೀಸ್ ಇಲಾಖೆ ಮಾಹಿತಿ ನೀಡಿದೆ. ಛಾಯಾಗ್ರಾಹಕ ಸಂಘದ ಬಂಟ್ವಾಳ ವಲಯದ ಸಕ್ರೀಯ ಸದಸ್ಯರಾಗಿದ್ದ ಇವರು ಅತ್ಯುತ್ತಮ ವಿಡಿಯೋಗ್ರಾಫರ್ ಆಗಿದ್ದರು. ಇನ್ನು ರಕ್ಷಿತ್ ಅವರ ಮಗಳ 10 ನೇ ವರ್ಷದ ಹುಟ್ಟು ಹಬ್ಬದ ಕಾರ್ಯಕ್ರಮ ನಾಳೆ ಮಾ.15 ರಂದು ಮನೆಯಲ್ಲಿ ನಡೆಸಲು ತಯಾರಿಗಳು ಆಗುತ್ತಿತ್ತು. ಮಗಳ ಹುಟ್ಟು ಹಬ್ಬದ ಸಂಭ್ರಮದ ಮನೆಯೀಗ ತಂದೆಯ ಸಾವಿನಿಂದ ಮೌನವಾಗಿ ರೋಧಿಸುತ್ತಿದೆ. ರಕ್ಷಿತ್ ಸಹೋದರ ರಂಜಿತ್ ಅವರು ಕೂಡ ಸುಮಾರು ವರ್ಷಗಳ ಹಿಂದೆ ಅಪಘಾತದಲ್ಲಿ ಗಾಯಗೊಂಡು ಮಲಗಿದ ಸ್ಥಿತಿಯಲ್ಲಿ ಮನೆಯಲ್ಲಿದ್ದಾರೆ. ಅತ್ಯಂತ ಬಡ ಕುಟುಂಬ ಇದೀಗ ಮನೆಯ ಆಧಾರಸ್ತಂಭವಿಲ್ಲದೆ ಕಂಗಲಾಗಿದೆ.

