ಮಧ್ಯಪ್ರಾಚ್ಯದಲ್ಲಿ ಇಸ್ರೇಲ್ – ಅಮೇರಿಕಾ ಮತ್ತು ಇರಾನ್ ನಡುವೆ ನಡೆಯುತ್ತಿರುವ ಭೀಕರ ಯುದ್ಧದ ಪರಿಣಾಮ ಇಡೀ ಪ್ರಪಂಚ ಅನುಭವಿಸುತ್ತಿದೆ. ಒಂದೆಡೆ ಪೆಟ್ರೋಲಿಯಂ ಉತ್ಪನ್ನಗಳಿಗಾಗಿ ಹಾಹಾಕಾರ ಶುರುವಾಗಿದ್ದರೆ, ಮತ್ತೊಂದೆಡೆ ಇಡೀ ಪ್ರಪಂಚದ ಹೆಚ್ಚಿನ ಎಲ್ಲಾ ದೇಶಗಳ ಆರ್ಥಿಕತೆ ಕುಸಿದುಬೀಳುವ ಮುನ್ಸೂಚನೆ ಸಿಗುತ್ತಿದೆ.
ಮಧ್ಯ ಪ್ರಾಚ್ಯದ ಯುದ್ಧದ ಎಫೆಕ್ಟ್ ಈಗ ಕರಾವಳಿಯ ಮೀನುಗಾರಿಕೆಗೂ ತಟ್ಟಿದ್ದು, ಮೀನು ವ್ಯಾಪಾರ ಮಾಡುವವರು ಭಾರೀ ನಷ್ಟ ಅನುಭವಿಸುತ್ತಿದ್ದಾರೆ. ಅದರಲ್ಲೂ ವಿಶೇಷವಾಗಿ ಮೀನುಗಾರ ಮಹಿಳೆಯರು ವ್ಯಾಪಾರವಿಲ್ಲದೆ ಭಾರೀ ನಷ್ಟಕ್ಕೆ ಸಿಲುಕಿದ್ದಾರೆ.
ಯುದ್ಧದ ಪರಿಣಾಮವಾಗಿ ಗ್ಯಾಸ್ ಲಭ್ಯತೆ ಇಲ್ಲದ ಕಾರಣ ಹೆಚ್ಚಿನ ಮೀನು ಊಟದ ಹೋಟೆಲ್ ಗಳು ಬಂದ್ ಆಗಿದೆ. ಕರಾವಳಿಯ ಅನೇಕ ಹೋಟೆಲ್ ಗಳು ಮುಚ್ಚಿರುವ ಪರಿಣಾಮ ಮೀನು ವ್ಯಾಪಾರದ ಮೇಲೂ ಹೊಡೆತ ಬಿದ್ದಿದೆ. ಪ್ರತಿದಿನ ಲಕ್ಷಾಂತರ ರೂಪಾಯಿ ಮೀನು ಖರೀದಿಸುತ್ತಿದ್ದ ಹೋಟೆಲ್ ಮಾಲೀಕರು ಈಗ ಮಾರುಕಟ್ಟೆ ಕಡೆ ತಲೆ ಹಾಕುತ್ತಿಲ್ಲ. ಇದರಿಂದ ದಿನದ ವ್ಯಾಪಾರ ನಂಬಿ ಜೀವನ ನಡೆಸುತ್ತಿದ್ದ ಮೀನುಗಾರ ಮಹಿಳೆಯರಿಗೆ ಭಾರೀ ನಷ್ಟ ಉಂಟಾಗಿದೆ. ಅಲ್ಲದೆ ಉಡುಪಿ ಜಿಲ್ಲೆಯ ಮಲ್ಪೆ ಬಂದರಿನಿಂದ ಕೇರಳ ಕಡೆಗೆ ಮೀನು ರಪ್ತು ಕೂಡ ನಿಂತಿದೆ.
ಒಟ್ಟಾರೆ ಮಧ್ಯ ಪ್ರಾಚ್ಯದ ಯುದ್ಧದ ಎಫೆಕ್ಟ್ ಪ್ರಪಂಚದ ಮೂಲೆ ಮೂಲೆಗೂ ತಟ್ಟುತ್ತಿದ್ದು, ಯುದ್ಧ ನಿಂತರೆ ಸಾಕು ಎನ್ನುವ ಮನಸ್ಥಿತಿಯಲ್ಲಿದ್ದಾರೆ ಜನರು.

