ಶಂಕರನಾರಾಯಣ: ಇಲ್ಲಿನ ಕುಂದಾಪುರ-ಅಂಪಾರು ರಸ್ತೆಯ ಮೂಡುಬಗೆಯ ಬಾಳ್ಕಟ್ಟು ಸೇತುವೆ ಸಮೀಪ ಖಾಸಗಿ ಬಸ್ ಮತ್ತು ಸ್ಕೂಟರ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ವೃದ್ಧರೊಬ್ಬರು ದುರ್ಮರಣಕ್ಕೀಡಾದ ಘಟನೆ ಶುಕ್ರವಾರನಡೆದಿದೆ. ಬಸವ ನಾಯ್ಕ (80) ಮೃತಪಟ್ಟ ದುರ್ದೈವಿ.
ಇಂದು ಬೆಳಗ್ಗೆ ಸುಮಾರು 11:45 ರ ವೇಳೆಗೆ ಬಸವ ನಾಯ್ಕ ಅವರು ತಮ್ಮ ಟಿವಿಎಸ್ ಎಕ್ಸ್ಎಲ್ ಮೋಟಾರು ಸೈಕಲ್ನಲ್ಲಿ ಕುಂದಾಪುರ-ಅಂಪಾರು ರಸ್ತೆಯ ಮೂಡುಬಗೆಯ ಬಾಳ್ಕಟ್ಟು ಸೇತುವೆ ಕಡೆಯಿಂದ ಬರುತ್ತಿದ್ದರು. ಶಾನ್ಕಟ್ಟು ರಸ್ತೆಗೆ ತಿರುಗಲು ಅವರು ಬಲಬದಿಯ ಇಂಡಿಕೇಟರ್ ಹಾಕಿ ರಸ್ತೆ ದಾಟುತ್ತಿದ್ದಾಗ, ಸಿದ್ದಾಪುರ ಕಡೆಯಿಂದ ಬಂದ ಖಾಸಗಿ ಬಸ್ ಡಿಕ್ಕಿ ಹೊಡೆದಿದೆ. ಬಸ್ ಚಾಲಕ ವಾಹನವನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು, ಬೈಕ್ಗೆ ಡಿಕ್ಕಿ ಹೊಡೆದಿದ್ದಲ್ಲದೆ ಕೆಲ ದೂರದವರೆಗೆ ಎಳೆದುಕೊಂಡು ಹೋಗಿದ್ದಾನೆ ಎನ್ನಲಾಗಿದೆ.
ಅಪಘಾತದ ತೀವ್ರತೆಗೆ ಬಸವ ನಾಯ್ಕ ಅವರಿಗೆ ಗಂಭೀರ ಗಾಯಗಳಾಗಿದ್ದವು. ತಕ್ಷಣವೇ ಸ್ಥಳದಲ್ಲಿದ್ದ ಸಾರ್ವಜನಿಕರು ಗಾಯಾಳುವನ್ನು ಕಾರಿನ ಮೂಲಕ ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಆದರೆ ಪರೀಕ್ಷಿಸಿದ ವೈದ್ಯಾಧಿಕಾರಿಗಳು ಬಸವ ನಾಯ್ಕ ಅವರು ಈಗಾಗಲೇ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಬಸ್ ಚಾಲಕನ ವಿರುದ್ಧ ಅಪರಾಧ ಕ್ರಮಾಂಕ 37/2026, ಕಲಂ: 281, 106 BNS ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

