ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಉಂಚಳ್ಳಿ ಸಮೀಪದ ಮಾಸ್ತಿಜಡ್ಡಿ ಗ್ರಾಮದಲ್ಲಿ ಭಾನುವಾರ ನಡೆದ ದುರಂತದಲ್ಲಿ ಹೊಳೆಯಲ್ಲಿ ಈಜಲು ತೆರಳಿದ್ದ ಬ್ರಹ್ಮಾವರದ ಎಸ್ ಎಂ ಎಸ್ ಕಾಲೇಜು ವಿದ್ಯಾರ್ಥಿ ಸಹಿತ ಇಬ್ಬರು ಸಹೋದರರು ನೀರಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಮೃತರನ್ನು ಹೊನ್ನಾವರ ನಿವಾಸಿಗಳಾದ ಮದನ್ ನಾಯ್ಕ (16) ಹಾಗೂ ಬ್ರಹ್ಮಾವರದ ಎಸ್ ಎಂ ಎಸ್ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿಸಿಎ ವ್ಯಾಸಂಗ ಮಾಡುತ್ತಿದ್ದ ಹರ್ಷ ನಾಯ್ಕ (18) ಎಂದು ಗುರುತಿಸಲಾಗಿದೆ. ಹಳ್ಳಕ್ಕೆ ಕಟ್ಟಿದ್ದ ಬಾಂದಾರದಲ್ಲಿ ಈಜಲು ಹೋಗಿದ್ದ ವೇಳೆ, ಸುಮಾರು 15 ಅಡಿ ಆಳದ ನೀರಿನಲ್ಲಿ ಮುಳುಗಿ ಇಬ್ಬರೂ ದುರ್ಘಟನೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಶ್ರೀ ಮಾರಿಕಾಂಬ ರೆಸ್ಕ್ಯೂ ಟೀಮ್ನ ಗೋಪಾಲ ಗೌಡ ನೇತೃತ್ವದ ತಂಡ ಶವಗಳನ್ನು ನೀರಿನಿಂದ ಮೇಲಕ್ಕೆತ್ತಿದೆ. ಬಳಿಕ ಬನವಾಸಿ ಪೊಲೀಸ್ ಠಾಣೆಯ ಪಿಎಸ್ಐ ಮಹಾಂತಪ್ಪ ಕುಂಬಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಶಿರಸಿಗೆ ರವಾನೆ ಮಾಡಲಾಗಿದೆ.
ಈ ಸಂಬಂಧ ಬನವಾಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

