ಮಣಿಪಾಲ: ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಹಿರಿಯ ನಾಗರಿಕನೊಬ್ಬರನ್ನು ಪತ್ನಿ ಹಾಗೂ ಮಕ್ಕಳು ನಿರ್ಲಕ್ಷ್ಯ ಮಾಡಿ ರೈಲು ನಿಲ್ದಾಣದ ಬಳಿ ತ್ಯಜಿಸಿದ ಆರೋಪದಡಿ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರುದಾರ ಜಗದೀಶ ಶೆಟ್ಟಿ (67) ಅವರು ನೀಡಿದ ದೂರಿನ ಪ್ರಕಾರ, ತಾವು ಅನಾರೋಗ್ಯದಿಂದ ಬಳಲುತ್ತಿರುವ ಸಂದರ್ಭದಲ್ಲಿ ಪತ್ನಿ ಸುನಂದ ಹಾಗೂ ಮಕ್ಕಳಾದ ಶ್ವೇತಾ, ನೀತಾ ಮತ್ತು ನಿತಿನ್ ಅವರು ತಮ್ಮ ಮೇಲೆ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ. ಅಲ್ಲದೆ, ಅವರಿಗೆ ಸಮರ್ಪಕವಾಗಿ ಊಟ-ತಿಂಡಿ ನೀಡದೇ ಹಾಗೂ ಅಗತ್ಯ ವೈದ್ಯಕೀಯ ಚಿಕಿತ್ಸೆ ಕಲ್ಪಿಸದೇ ನಿರ್ಲಕ್ಷ್ಯ ವಹಿಸಿದ್ದಾರೆ ಎನ್ನಲಾಗಿದೆ.
ದೂರಿನ ಪ್ರಕಾರ, ಜುಲೈ 11ರಂದು ಮಹಾರಾಷ್ಟ್ರದ ಪನ್ವೆಲ್ನಿಂದ ಜಗದೀಶ ಶೆಟ್ಟಿಯವರನ್ನು ಬಲವಂತವಾಗಿ ಉಡುಪಿಗೆ ಕರೆತರಲಾಗಿದೆ. ಬಳಿಕ ಜುಲೈ 12ರಂದು ಬೆಳಿಗ್ಗೆ ಸುಮಾರು 8.30 ಗಂಟೆಗೆ ಉಡುಪಿ ತಾಲೂಕಿನ ಶಿವಳ್ಳಿ ಗ್ರಾಮದ ಇಂದ್ರಾಳಿ ರೈಲ್ವೆ ನಿಲ್ದಾಣದ ಸಮೀಪ ಆಟೋ ರಿಕ್ಷಾದಲ್ಲಿ ಕರೆತಂದು, ಅವರನ್ನು ನೋಡಿಕೊಳ್ಳುವುದಿಲ್ಲ ಎಂದು ಹೇಳಿ ಅಲ್ಲಿಯೇ ಬಿಟ್ಟು ತೆರಳಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಹಿರಿಯ ನಾಗರಿಕರಾಗಿರುವ ತಮ್ಮ ಆರೈಕೆ ಮತ್ತು ರಕ್ಷಣೆಯ ಜವಾಬ್ದಾರಿ ಹೊಂದಿರುವ ಪತ್ನಿ ಹಾಗೂ ಮಕ್ಕಳು ತಮ್ಮ ಕರ್ತವ್ಯ ನಿರ್ವಹಿಸದೇ ತೊಂದರೆ ನೀಡಿದ್ದಾರೆ ಎಂದು ಜಗದೀಶ ಶೆಟ್ಟಿ ಆರೋಪಿಸಿದ್ದಾರೆ.
ಈ ಸಂಬಂಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 109/2026ರಡಿ ಹಿರಿಯ ನಾಗರಿಕರ ಪಾಲನೆ ಮತ್ತು ಕಲ್ಯಾಣ ಕಾಯ್ದೆ-2007ರ ಕಲಂ 24ರ ಅನ್ವಯ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

