ಉಡುಪಿ: ಡಿಜಿಟಲ್ ಅರೆಸ್ಟ್ ಹಾಗೂ ಮನಿ ಲಾಂಡರಿಂಗ್ ಬೆದರಿಕೆಯೊಡ್ಡಿ ಉಡುಪಿಯ ನಿವೃತ್ತ ಬ್ಯಾಂಕ್ ಉದ್ಯೋಗಿಯೊಬ್ಬರಿಗೆ ಬರೋಬ್ಬರಿ 22 ಲಕ್ಷ ರೂಪಾಯಿ ವಂಚಿಸಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಉಡುಪಿ ತಾಲೂಕಿನ ನಿವಾಸಿ, ದಿವಂಗತ ನಾಗೇಶ್ ಕಾಮತ್ ಅವರ ಪುತ್ರ ಜಯಕರ ಕಾಮತ್ ಪಿ ವಂಚನೆಗೊಳಗಾದ ದುರ್ದೈವಿಯಾಗಿದ್ದಾರೆ. ಈ ಕುರಿತು ಉಡುಪಿಯ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜುಲೈ 10ರಂದು ಮಧ್ಯಾಹ್ನ ಸುಮಾರು 3:00 ಗಂಟೆಗೆ ಜಯಕರ ಕಾಮತ್ ಅವರ ಮೊಬೈಲ್ಗೆ ಅಪರಿಚಿತ ನಂಬರ್ನಿಂದ ವಾಟ್ಸಾಪ್ ವೀಡಿಯೋ ಕಾಲ್ ಬಂದಿತ್ತು. ಕರೆ ಸ್ವೀಕರಿಸಿದಾಗ ಪೊಲೀಸ್ ಯೂನಿಫಾರ್ಮ್ನಲ್ಲಿದ್ದ ವ್ಯಕ್ತಿಯೊಬ್ಬ ತಾನು ಮುಂಬೈನ ಕೊಲಬಾ ಸೈಬರ್ ಕ್ರೈಮ್ ಠಾಣೆಯಿಂದ ಮಾತನಾಡುತ್ತಿರುವುದಾಗಿ ಪರಿಚಯಿಸಿಕೊಂಡಿದ್ದ. “ನಿಮ್ಮ ಹೆಸರಿನಲ್ಲಿ ಮುಂಬೈನ ಕೆನರಾ ಬ್ಯಾಂಕ್ನಲ್ಲಿ ಖಾತೆಯೊಂದಿದ್ದು, ಅದರ ಎಟಿಎಂ ಕಾರ್ಡ್ ಬಳಸಿ ನೂರಾರು ಕೋಟಿ ರೂಪಾಯಿ ಮನಿ ಲಾಂಡರಿಂಗ್ (ಅಕ್ರಮ ಹಣ ವರ್ಗಾವಣೆ) ಮಾಡಲಾಗಿದೆ” ಎಂದು ಹೆದರಿಸಿದ್ದಲ್ಲದೆ, ಅದಕ್ಕೆ ಸಂಬಂಧಿಸಿದ ನಕಲಿ ದಾಖಲೆಗಳನ್ನು ತೋರಿಸಿ ವೃದ್ಧರನ್ನು ಆತಂಕಕ್ಕೆ ತಳ್ಳಿದ್ದ.
ಇದಾದ ಬಳಿಕ, ಜುಲೈ 11 ರಿಂದ ಜುಲೈ 16ರ ಅವಧಿಯಲ್ಲಿ ಆರೋಪಿಗಳು 7815889979 ಸೇರಿದಂತೆ ವಿವಿಧ ನಂಬರ್ಗಳಿಂದ ಪದೇ ಪದೇ ವಾಟ್ಸಾಪ್ ಕರೆಗಳನ್ನು ಮಾಡಿದ್ದರು. ತಾವು ಎಡಿಜಿಪಿ ವಿಶ್ವಾಸ್, ಇ.ಡಿ ಅಧಿಕಾರಿ ಅನಿಲ್ ಕುಮಾರ್ ಹಾಗೂ ಸೈಬರ್ ಪೊಲೀಸ್ ಅಧಿಕಾರಿಗಳೆಂದು ನಂಬಿಸಿದ್ದರು. “ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ಫಂಡ್ ವೆರಿಫಿಕೇಶನ್ (ಹಣದ ತಪಾಸಣೆ) ಮಾಡಬೇಕಿದೆ. ತಪಾಸಣೆ ಮುಗಿದ ನಂತರ ಹಣವನ್ನು ವಾಪಸ್ ಮಾಡಲಾಗುವುದು, ಇಲ್ಲದಿದ್ದರೆ ನಿಮ್ಮನ್ನು ಬಂಧಿಸಲಾಗುವುದು” ಎಂದು ತೀವ್ರವಾಗಿ ಬೆದರಿಸಿದ್ದರು.
ಅಧಿಕಾರಿಗಳ ಸೋಗಿನಲ್ಲಿದ್ದ ವಂಚಕರ ಮಾತನ್ನು ನಿಜವೆಂದು ನಂಬಿದ ಜಯಕರ ಕಾಮತ್ ಅವರು, ತಮ್ಮ ಬ್ಯಾಂಕ್ ಖಾತೆಗಳ ವಿವರಗಳನ್ನು ನೀಡಿ, ಆರೋಪಿಗಳು ಸೂಚಿಸಿದ ಬ್ಯಾಂಕ್ ಖಾತೆಗೆ RTGS ಮೂಲಕ ಹಂತ-ಹಂತವಾಗಿ ಒಟ್ಟು 22,00,000/- (ಇಪ್ಪತ್ತೆರಡು ಲಕ್ಷ) ರೂಪಾಯಿಗಳನ್ನು ವರ್ಗಾವಣೆ ಮಾಡಿದ್ದರು. ತದನಂತರ ತಾನು ಮೋಸ ಹೋಗಿರುವುದು ಅರಿವಿಗೆ ಬರುತ್ತಿದ್ದಂತೆ ಅವರು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.
ಸದ್ಯ ಸಂತ್ರಸ್ತರ ದೂರಿನ ಮೇರೆಗೆ ಉಡುಪಿ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ: 29/2026ರಡಿ, ಐಟಿ ಆಕ್ಟ್ನ ಕಲಂ 66(D) ಹಾಗೂ ಭಾರತೀಯ ನ್ಯಾಯ ಸಂಹಿತೆಯ (BNS) ಕಲಂ 114(4), 319(2), 308(2), 318(4) ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.

