ಮಂಗಳೂರು: ಇಡೀ ಕರಾವಳಿ ಜಿಲ್ಲೆಯನ್ನೇ ಬೆಚ್ಚಿಬೀಳಿಸಿದ್ದ ಬಂಟ್ವಾಳದ ಬಿ.ಸಿ. ರೋಡ್ನಲ್ಲಿ ನಡೆದ ಯುವತಿ ಲಾವಣ್ಯ ಎಂಬಾಕೆಯ ಬರ್ಬರ ಹತ್ಯೆ ಪ್ರಕರಣದ ಆರೋಪಿ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಕೊಲೆಗಡುಕ ಚೇತನ್ ಎಂಬಾತನನ್ನು ತೀವ್ರ ಕಾರ್ಯಾಚರಣೆ ನಡೆಸಿ ಬಂಧಿಸಿರುವ ಪೊಲೀಸರು, ಪ್ರಸ್ತುತ ಆತನನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
ಪ್ರಕರಣದ ಹಿನ್ನೆಲೆ ಏನು?
ಗುರುವಾರ ಸಂಜೆ ಬಂಟ್ವಾಳದ ಬಿ.ಸಿ. ರೋಡ್ನ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಬಳಿ ಈ ಭೀಕರ ಘಟನೆ ನಡೆದಿತ್ತು. ಬಂಟ್ವಾಳ ತಾಲೂಕಿನ ಕಕ್ಯಪದವು ನಿವಾಸಿಯಾದ ಲಾವಣ್ಯ (೨೫) ಎಂಬ ಯುವತಿಯನ್ನು ಆಕೆಯ ದೂರದ ಸಂಬಂಧಿ, ಬೆಳ್ತಂಗಡಿಯ ಒಡಿಲ್ನಾಳ ನಿವಾಸಿ ಚೇತನ್ (೨೨) ಎಂಬಾತ ಸಾರ್ವಜನಿಕರ ಎದುರೇ ತಲವಾರಿನಿಂದ ಕೊಚ್ಚಿ ಅಮಾನುಷವಾಗಿ ಹತ್ಯೆ ಮಾಡಿದ್ದ.
ಲಾವಣ್ಯ ಕಲ್ಲಡ್ಕದ ಖಾಸಗಿ ನರ್ಸಿಂಗ್ ಹೋಂ ಒಂದರಲ್ಲಿ ಕೆಲಸ ಮುಗಿಸಿ ಮನೆಗೆ ಮರಳಲು ಬಸ್ ಹತ್ತಿ ಕುಳಿತಿದ್ದ ಸಂದರ್ಭದಲ್ಲಿ ಆರೋಪಿ ಚೇತನ್ ಆಕೆಯ ಬಳಿ ತೆರಳಿದ್ದನು. ಆತನ ಬ್ಯಾಗ್ನಲ್ಲಿದ್ದ ಮಾರಕಾಸ್ತ್ರವನ್ನು ಕಂಡು ಆತಂಕಗೊಂಡ ಲಾವಣ್ಯ ಪ್ರಾಣಭಯದಿಂದ ಬಸ್ನಿಂದ ಇಳಿದು ಓಡಲು ಯತ್ನಿಸಿದ್ದಳು. ಆದರೆ, ರಕ್ಕಸನಂತೆ ಆಕೆಯನ್ನು ಬೆನ್ನಟ್ಟಿದ ಚೇತನ್, ಸಾರ್ವಜನಿಕರ ಕಣ್ಣೆದುರಲ್ಲೇ ಆಕೆಯ ಕುತ್ತಿಗೆಯ ಹಿಂಭಾಗಕ್ಕೆ ಭೀಕರವಾಗಿ ಕೊಚ್ಚಿದ್ದನು. ಗಂಭೀರವಾಗಿ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ಲಾವಣ್ಯ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು.

