ಉಡುಪಿ: ಮುಂಬೈ ಪೊಲೀಸ್ ಅಧಿಕಾರಿ ಸೋಗಿನಲ್ಲಿ ಬಂದ ವಂಚಕರು ಡಿಜಿಟಲ್ ಅರೆಸ್ಟ್ ಭೀತಿ ಹುಟ್ಟಿಸಿ ವೃದ್ಧೆಯೊಬ್ಬರಿಂದ ಬರೋಬ್ಬರಿ 65 ಲಕ್ಷ ರೂಪಾಯಿ ಹಣ ದೋಚಿರುವ ಆಘಾತಕಾರಿ ಘಟನೆ ಉಡುಪಿಯಲ್ಲಿ ನಡೆದಿದೆ. ಇಲ್ಲಿನ ನಿವಾಸಿ ಶೀಲಾ (66) ವಂಚನೆಗೊಳಗಾದ ದುರ್ದೈವಿ.
ಕಳೆದ ಜುಲೈ 13 ರಂದು ಶೀಲಾ ಅವರ ಮೊಬೈಲ್ಗೆ ‘ಮುಂಬೈ ಪೊಲೀಸ್ ಇಲಾಖೆ’ ಹೆಸರಿನಲ್ಲಿ ವಾಟ್ಸಪ್ ಸಂದೇಶ ಬಂದಿತ್ತು. ಬಳಿಕ ಪೊಲೀಸ್ ಸಮವಸ್ತ್ರ ಧರಿಸಿದ್ದ ವ್ಯಕ್ತಿಯೊಬ್ಬ ವಾಟ್ಸಪ್ ವಿಡಿಯೋ ಕಾಲ್ ಮಾಡಿ, ತಾನು ಮುಂಬೈ ಕೊಲಬಾ ಪೊಲೀಸ್ ಇನ್ಸ್ಪೆಕ್ಟರ್ ಎಂದು ಪರಿಚಯಿಸಿಕೊಂಡಿದ್ದ. ಮನೆಯಲ್ಲಿ ಯಾರಿದ್ದಾರೆ ಎಂದು ವಿಚಾರಿಸಿ, ವೃದ್ಧೆ ಒಬ್ಬರೇ ಇರುವುದನ್ನು ಖಚಿತಪಡಿಸಿಕೊಂಡ ಆತ, “ನಿಮ್ಮ ಕೆನರಾ ಬ್ಯಾಂಕ್ ಖಾತೆಗೆ 20 ಕೋಟಿ ರೂಪಾಯಿ ಅಕ್ರಮ ಹಣ ಜಮಾವಣೆಗೊಂಡಿದೆ. ಈ ಸಂಬಂಧ ನಿಮ್ಮ ವಿರುದ್ಧ ವಾರಂಟ್ ಜಾರಿಯಾಗಿದ್ದು, ಮಂಗಳೂರು ಪೊಲೀಸರು ನಿಮ್ಮನ್ನು ಬಂಧಿಸಲಿದ್ದಾರೆ” ಎಂದು ಹೆದರಿಸಿದ್ದ.
ಕೇಸಿನಿಂದ ಬಚಾವ್ ಮಾಡುವುದಾಗಿ ನಂಬಿಸಿ ಆಕೆಯ ಬ್ಯಾಂಕ್ ಖಾತೆಗಳ ವಿವರ ಹಾಗೂ ಫೋಟೋಗಳನ್ನು ಬಲವಂತವಾಗಿ ಪಡೆದುಕೊಂಡಿದ್ದ ವಂಚಕರು, ಖಾತೆಯಲ್ಲಿರುವ ನೋಟುಗಳ ಸೀರಿಯಲ್ ನಂಬರ್ ಪರಿಶೀಲಿಸಬೇಕೆಂದು ಹೇಳಿ ತಾವೂ ಸೂಚಿಸಿದ ಖಾತೆಗಳಿಗೆ ಹಣ ವರ್ಗಾಯಿಸುವಂತೆ ಬೆದರಿಸಿದ್ದರು. ಈ ಮಾತನ್ನು ನಿಜವೆಂದು ನಂಬಿದ ವೃದ್ಧೆ ಜುಲೈ 13 ರಿಂದ ಜುಲೈ 17 ರ ಅವಧಿಯಲ್ಲಿ ಹಂತ ಹಂತವಾಗಿ ಒಟ್ಟು 65,00,000/- (65 ಲಕ್ಷ) ರೂಪಾಯಿಗಳನ್ನು ವಂಚಕರ ಖಾತೆಗೆ ವರ್ಗಾಯಿಸಿದ್ದಾರೆ. ತಾನು ವಂಚನೆಗೊಳಗಾಗಿರುವುದು ತಡವಾಗಿ ಬೆಳಕಿಗೆ ಬಂದ ತಕ್ಷಣ ಶೀಲಾ ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸದ್ಯ ಈ ಬಗ್ಗೆ ಉಡುಪಿಯ ಸೆನ್ (CEN) ಅಪರಾಧ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 30/2026, ಐಟಿ ಕಾಯ್ದೆಯ ಕಲಂ 66(D) ಹಾಗೂ ಬಿಎನ್ಎಸ್ (BNS) ಕಾಯ್ದೆಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

