ಉಡುಪಿ ಜಿಲ್ಲೆಯಲ್ಲಿ ಕೃಷಿ ವಲಯದ ಉತ್ಪಾದಕತೆ ಹೆಚ್ಚಿಸಲು ಹಾಗೂ ರೈತರಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಸುವ ಉದ್ದೇಶದಿಂದ ಕೃಷಿ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನ ರಾಜ್ಯ, ಜಿಲ್ಲಾ ಹಾಗೂ ತಾಲೂಕು ಮಟ್ಟದ ಕೃಷಿ ಪ್ರಶಸ್ತಿಗೆ ರೈತರು ಮತ್ತು ರೈತ ಮಹಿಳೆಯರಿಂದ ಅರ್ಜಿ ಆಹ್ವಾನಿಸಲಾಗಿದೆ. ಮುಂಗಾರು ಹಂಗಾಮಿನ ಮಳೆಯಾಶ್ರಿತ ಭತ್ತದ ಬೆಳೆಯಲ್ಲಿ ಬೆಳೆ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು, ಮೂರೂ ಹಂತಗಳ ಸ್ಪರ್ಧೆಗೆ ಅನ್ವಯಿಸುವಂತೆ ಒಂದೇ ಅರ್ಜಿಯನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಆಸಕ್ತ ರೈತರು ತಮ್ಮ ರೈತರ ಎಫ್.ಐ.ಡಿ (FID) ಯನ್ನು ಬಳಸಿಕೊಂಡು ಅಗತ್ಯ ದಾಖಲೆಗಳೊಂದಿಗೆ ಕೆ-ಕಿಸಾನ್ ಪೋರ್ಟಲ್ ಮೂಲಕ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
ರೈತರು ಹಾಗೂ ರೈತ ಮಹಿಳೆಯರು ‘ಸಿಟಿಜನ್ ಲಾಗಿನ್’ ಮೂಲಕ ಸ್ವತಃ ಅಥವಾ ಹತ್ತಿರದ ರೈತ ಸಂಪರ್ಕ ಕೇಂದ್ರ, ನಾಗರೀಕ ಸೇವಾ ಕೇಂದ್ರಗಳಿಗೆ ಅಗತ್ಯ ದಾಖಲಾತಿಗಳೊಂದಿಗೆ ಭೇಟಿ ನೀಡಿ ಆನ್ಲೈನ್ ನೋಂದಣಿ ಮಾಡಿಕೊಳ್ಳಬಹುದು. ಅರ್ಜಿ ಸಲ್ಲಿಸಲು ಆಗಸ್ಟ್ 31 ಕೊನೆಯ ದಿನವಾಗಿದೆ. ಬೆಳೆ ಸ್ಪರ್ಧೆಯಲ್ಲಿ ಭಾಗವಹಿಸಲು ರೈತರು ಕನಿಷ್ಟ ಒಂದು ಎಕರೆ ಪ್ರದೇಶದಲ್ಲಿ ಸ್ವತಃ ಬೇಸಾಯದಲ್ಲಿ ತೊಡಗಿರಬೇಕು ಹಾಗೂ ಕಂದಾಯ ದಾಖಲೆಯ ಪ್ರಕಾರ ಖಾತೆ ಹೊಂದಿರುವ ಕ್ರಿಯಾಶೀಲ ರೈತರಾಗಿರಬೇಕು. ಒಂದು ಕುಟುಂಬದಿಂದ ಒಬ್ಬರು ಮಾತ್ರ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹರಿರುತ್ತಾರೆ.
ಸರ್ಕಾರಿ ಹಾಗೂ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ನೌಕರರು ಮತ್ತು ಅವರ ಕುಟುಂಬದ ಸದಸ್ಯರು ಈ ಸ್ಪರ್ಧೆಯಲ್ಲಿ ಭಾಗವಹಿಸುವಂತಿಲ್ಲ. ಇಲಾಖೆಯ ಮಾರ್ಗಸೂಚಿಯನ್ವಯ ನಿಗದಿಪಡಿಸುವ ಸ್ಪರ್ಧಾತ್ಮಕ ಇಳುವರಿ ಮಟ್ಟಕ್ಕಿಂತ ಹೆಚ್ಚಿನ ಇಳುವರಿ ಪಡೆದ ರೈತರನ್ನು ಮಾತ್ರ ಬಹುಮಾನಕ್ಕೆ ಪರಿಗಣಿಸಲಾಗುತ್ತದೆ. ಕಳೆದ ಐದು ವರ್ಷಗಳ ಅವಧಿಯಲ್ಲಿ ಕೃಷಿ ಪ್ರಶಸ್ತಿ ಪಡೆದ ರೈತರು ಅದೇ ಹಂತದ ಸ್ಪರ್ಧೆಯಲ್ಲಿ ಪುನಃ ಭಾಗವಹಿಸುವಂತಿಲ್ಲವಾದರೂ, ಮೇಲಿನ ಹಂತದ ಸ್ಪರ್ಧೆಗೆ ಸ್ಪರ್ಧಿಸಲು ಅವಕಾಶವಿರುತ್ತದೆ. ಆದರೆ, ಕಳೆದ ಐದು ವರ್ಷಗಳಲ್ಲಿ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಯಾವುದೇ ಬಹುಮಾನ ಪಡೆದಿದ್ದಲ್ಲಿ ಅಂತಹ ರೈತರ ಅರ್ಜಿಯನ್ನು ನೇರವಾಗಿ ತಿರಸ್ಕರಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಗಳು ಅಥವಾ ತಾಲೂಕು ಸಹಾಯಕ ಕೃಷಿ ನಿರ್ದೇಶಕರನ್ನು ಸಂಪರ್ಕಿಸುವಂತೆ ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕರ ಕಚೇರಿ ಪ್ರಕಟಣೆ ತಿಳಿಸಿದೆ.

