ಕಾಪು: ಬಸ್ ಸಮಯದ (ಟೈಮಿಂಗ್ಸ್) ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಖಾಸಗಿ ಬಸ್ಗಳ ಸಿಬ್ಬಂದಿ ರಸ್ತೆಯಲ್ಲೇ ಜಗಳವಾಡಿ, ಸಾರ್ವಜನಿಕ ಶಾಂತಿಗೆ ಭಂಗ ತಂದಿರುವ ಘಟನೆ ಕಾಪು ಪಡು ಗ್ರಾಮದ ಹೊಸ ಮಾರಿಗುಡಿ ಅಂಡರ್ ಪಾಸ್ ಬಳಿ ಸೋಮವಾರ ನಡೆದಿದೆ.
ಘಟನೆಗೆ ತಕ್ಷಣ ಸ್ಪಂದಿಸಿರುವ ಕಾಪು ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದು, ಕೃತ್ಯಕ್ಕೆ ಬಳಸಲಾದ ಎರಡೂ ಖಾಸಗಿ ಬಸ್ಗಳನ್ನು ವಶಪಡಿಸಿಕೊಂಡಿದ್ದಾರೆ.
ಸೋಮವಾರ (ಜುಲೈ 27) ಬೆಳಿಗ್ಗೆ 9:27 ರ ಸುಮಾರಿಗೆ ಕಾಪು ಹೊಸ ಮಾರಿಗುಡಿ ಅಂಡರ್ ಪಾಸ್ ಬಳಿಯ ಬಸ್ ನಿಲ್ದಾಣದ ಎದುರು ‘ಸಂದೇಶ್’ (KA 20 AB 5493) ಹಾಗೂ ‘ಆನಂದ್’ (KA 19 AE 1095) ನೋಂದಣಿ ಸಂಖ್ಯೆಯ ಖಾಸಗಿ ಬಸ್ಗಳ ನಡುವೆ ಸಮಯದ ವಿಚಾರವಾಗಿ ಗಲಾಟೆ ಆರಂಭವಾಗಿದೆ. ಮಾತಿಗೆ ಮಾತು ಬೆಳೆದು, ಎರಡೂ ಬಸ್ಗಳನ್ನು ಪರಸ್ಪರ ತಾಗಿಸಿ ಅಪಾಯಕಾರಿಯಾಗಿ ಚಲಾಯಿಸಿದ್ದಲ್ಲದೆ, ಬಸ್ ಚಾಲಕರು ಹಾಗೂ ಕಂಡಕ್ಟರ್ಗಳು ಸಾರ್ವಜನಿಕ ಸ್ಥಳದಲ್ಲೇ ಕೈಕೈ ಮಿಲಾಯಿಸಿ, ಅಸಭ್ಯ ಶಬ್ದಗಳಿಂದ ಪರಸ್ಪರ ನಿಂದಿಸಿಕೊಂಡಿದ್ದಾರೆ. ಇದರಿಂದ ರಸ್ತೆಯಲ್ಲಿದ್ದ ಪ್ರಯಾಣಿಕರು ಹಾಗೂ ಸಾರ್ವಜನಿಕರ ನೆಮ್ಮದಿಗೆ ಧಕ್ಕೆಯಾಗಿತ್ತು.
ಘಟನೆ ಸಂಬಂಧ ಕಾಪು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 89/2026 ರಂತೆ ಪ್ರಕರಣ ದಾಖಲಾಗಿದೆ. ಪ್ರಕರಣದ ಆರೋಪಿಗಳಾದ ಬಸ್ ಚಾಲಕರಾದ ರಮೇಶ್, ಅಭಿಷೇಕ್ ಹಾಗೂ ಕಂಡಕ್ಟರ್ಗಳಾದ ವಿಜಯಕುಮಾರ್ ಮತ್ತು ಹರೀಶ್ ಬಿ. ಹೆಗ್ಡೆ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 281, 194(2), 292, 324(4), 115(2), 352, 351(2) ರಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಎರಡೂ ಬಸ್ಗಳನ್ನು ಜಪ್ತಿ ಮಾಡಿ ತನಿಖೆ ಮುಂದುವರಿಸಲಾಗಿದೆ.

