ಮಹಿಳೆಯರ ಆರೋಗ್ಯದ ಕಾಳಜಿಗೆ ಹೊಸ ಹೆಜ್ಜೆ ಇಟ್ಟಿರುವ ರಾಜ್ಯ ಸರ್ಕಾರ ‘ಋತುತಾರೆ’ ಹೆಸರಿನಲ್ಲಿ ಆರೋಗ್ಯ ಜಾಗೃತಿ ಯೋಜನೆಯನ್ನು ಆರಂಭ ಮಾಡಿದೆ. ಈ ಯೋಜನೆಗೆ ಚಿತ್ರ ನಟಿ, ಕಾಂಗ್ರೆಸ್ ಸದಸ್ಯೆ ಮೋಹಕತಾರೆ ರಮ್ಯಾ ಅವರನ್ನು ಬ್ರ್ಯಾಂಡ್ ಅಂಬಾಸಿಡರ್ ಆಗಿ ಆಯ್ದುಕೊಂಡಿದೆ.
ಮಹಿಳೆಯರ ತಿಂಗಳ ಋತು ಚಕ್ರದ ಸಮಸ್ಯೆ, ಮೆನೋಪಾಸ್ ಮತ್ತು ಇನ್ನಿತರ ದೈಹಿಕ ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಈ ಮಹತ್ವದ ಯೋಜನೆಯನ್ನು ಆರಂಭಿಸಿರುವುದಾಗಿದೆ. ಇದರ ಉದ್ದೇಶ ಮಹಿಳೆಯರಿಗೆ ಅಗತ್ಯವಾದ ಮಾರ್ಗದರ್ಶನ ಮತ್ತು ಬೆಂಬಲ ನೀಡುವುದಾಗಿದೆ.
ಈ ಯೋಜನೆಗೆ ಸಂಬಂಧಿಸಿದ ಹಾಗೆ ಆರೋಗ್ಯ ಸಚಿವ ಯು. ಟಿ. ಖಾದರ್ ಮತ್ತು ನಟಿ ರಮ್ಯಾ ವಿಧಾನಸೌಧದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಸ್ತ್ರೀಯರ ಆರೋಗ್ಯಕ್ಕೆ ಸಂಬಂಧಿಸಿದ ಹಾಗೆ ವೈಜ್ಞಾನಿಕವಾಗಿ ಅಧ್ಯಯನ ನಡೆಸಿ ಸೂಕ್ತ ಸಲಹೆ, ಪರಿಹಾರಗಳನ್ನು ಮಹಿಳೆಯರಿಗೆ ನೀಡುವ ಉದ್ದೇಶದಿಂದ ತಜ್ಞ ವೈದ್ಯರ ಸಮಿತಿಯನ್ನು ಸಹ ಸರ್ಕಾರ ಈಗಾಗಲೇ ರಚನೆ ಮಾಡಿದೆ.
ಮೆನೋಪಾಸ್ ಸಂದರ್ಭದಲ್ಲಿ ಸ್ತ್ರೀಯರು ಸಾಕಷ್ಟು ಮಾನಸಿಕ, ದೈಹಿಕ ಸಮಸ್ಯೆಗಳನ್ನು ಎದುರಿಸುತ್ತಾರೆ. ಭಾರತದಲ್ಲಿ ಮೆನೋಪಾಸ್ ಕಡಿಮೆ ವಯಸ್ಸಿನಲ್ಲೇ ಕಾಣಿಸಿಕೊಳ್ಳುತ್ತಿರುವುದು ಗಮನಾರ್ಹ ಬೆಳವಣಿಗೆ. ಇದರ ಬಗ್ಗೆ ಅರಿವು ಮೂಡಿಸಲು ಸರ್ಕಾರ ಈ ಯೋಜನೆ ರೂಪಿಸಿರುವುದು ಸ್ವಾಗತಾರ್ಹ ಎಂದು ನಟಿ ರಮ್ಯಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮಹಿಳೆಯರಲ್ಲಿ ಆರೋಗ್ಯದ ಬಗ್ಗೆ ಮುಕ್ತ ಸಂವಾದಕ್ಕೆ ಅವಕಾಶ ಕಲ್ಪಿಸುವುದು, ತಜ್ಞರ ಸಲಹೆ ಲಭ್ಯವಾಗುವಂತೆ ಮಾಡುವುದು ಹಾಗೂ ಅಗತ್ಯ ವೈದ್ಯಕೀಯ ನೆರವು ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ವಿಸ್ತರಿಸುವುದು ‘ಋತುತಾರೆ’ ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಈ ಯೋಜನೆಯ ಮೂಲಕ ರಾಜ್ಯದ ಮಹಿಳೆಯರು ತಮ್ಮ ಆರೋಗ್ಯ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಚರ್ಚಿಸಿ, ಸಮಯೋಚಿತ ಚಿಕಿತ್ಸೆ ಮತ್ತು ಮಾರ್ಗದರ್ಶನ ಪಡೆಯಲು ಅನುಕೂಲವಾಗಲಿದೆ ಎನ್ನುವುದು ಸರ್ಕಾರದ ವಿಶ್ವಾಸ.

