ಮಂಗಳೂರು: ಯುವಜನರನ್ನು ಡ್ರಗ್ಸ್ ಮುಕ್ತರನ್ನಾಗಿ ಮಾಡಬೇಕೆಂದು ಪೊಲೀಸ್ ಇಲಾಖೆ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದೆ. ಕಾಲೇಜು, ಶಿಕ್ಷಣ ಸಂಸ್ಥೆಗಳು ಸಹ ಡ್ರಗ್ಸ್ ಮುಕ್ತ ಸಮಾಜ ನಿರ್ಮಾಣದ ದೃಷ್ಟಿಯಿಂದ ಎಚ್ಚರಿಕೆಯಿಂದ ಕೆಲಸ ಮಾಡುತ್ತಿವೆ.
ಕಾಲೇಜುಗಳಲ್ಲಿಯೂ ಡ್ರಗ್ಸ್ ವಿರೋಧಿ ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಿವೆ. ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಸಹ ವಿದ್ಯಾರ್ಥಿಗಳನ್ನು ಡ್ರಗ್ಸ್ ಕಪಿಮುಷ್ಟಿಯಿಂದ ಕಾಪಾಡಲು ಶ್ರಮಿಸುತ್ತಿವೆ. ಇಂತಹ ಸಂದರ್ಭದಲ್ಲಿ ಕಾಲೋಜೊಂದರ ಆಡಳಿತ ಮಂಡಳಿ ನಡೆಸಿದ ತಪಾಸಣೆಯ ವೇಳೆ ಸಣ್ಣ ಸಣ್ಣ ಪ್ಯಾಕೆಟ್ಗಳಲ್ಲಿ ಸುಮಾರು 290 ಗ್ರಾಂ ಗಾಾಂಜಾ ಪತ್ತೆಯಾಗಿದ್ದು, ಮೂವರು ವಿದ್ಯಾರ್ಥಿಗಳನ್ನು ಪೊಲೀಸರಿಗೆ ಒಪ್ಪಿಸಲಾಗಿದೆ.
ತಪಾಸಣೆ ವೇಳೆ ಆಡಳಿತ ಮಂಡಳಿಗೆ ಡ್ರಗ್ಸ್ ದೊರೆತಿದ್ದು ತಕ್ಷಣವೇ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಂಧಿತ ಮೂವರು ವಿದ್ಯಾರ್ಥಿಗಳ ವೈದ್ಯಕೀಯ ಪರೀಕ್ಷೆ ನಡೆಸಲಾಗಿದ್ದು, ಈ ವೇಳೆ ಅವರು ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ.
ಕಾಲೇಜಿನೊಳಕ್ಕೆ ಗಾಂಜಾ ತಂದ ವಿದ್ಯಾರ್ಥಿಯನ್ನು ಕೋರ್ಟ್ಗೆ ಹಾಜರುಪಡಿಸಲಾಗಿದ್ದ, ಆತನ ಶೈಕ್ಷಣಿಕ ಹಿನ್ನೆಲೆ ಗಣನೆಗೆ ತೆಗೆದುಕೊಂಡು ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ವಿದ್ಯಾರ್ಥಿಗಳಿಗೆ ಗಾಂಜಾ ನೀಡಿದ ಪೆಡ್ಲರ್ಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾಗಿ ತಿಳಿದು ಬಂದಿದೆ.

