ಮಂಗಳೂರು: ಆಗಸ್ಟ್ 11 ರಿಂದ ನೈರುತ್ಯ ರೈಲ್ವೆಯ ಮೈಸೂರು ವಿಭಾಗವು ಬೆಂಗಳೂರು – ಮಂಗಳೂರು ನಡುವೆ ಪ್ರಾಯೋಗಿಕ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಸಂಚಾರವನ್ನು ನಡೆಸಲು ಸಿದ್ಧತೆ ಮಾಡಿಕೊಂಡಿದೆ. ಆ ಮೂಲಕ ಕರಾವಳಿಗರ ಬಹುಕಾಲದ ಕನಸು ನನಸಾಗುವ ಕಾಲ ಸನ್ನಿಹಿತವಾಗಿದೆ.
ಆಗಸ್ಟ್ 11 ರಿಂದ ತೊಡಗಿದಂತೆ ಆಗಸ್ಟ್ 20 ರ ವರೆಗೆ ವಂದೇ ಭಾರತ್ ಪ್ರಾಯೋಗಿಕ ರೈಲು ಸಂಚಾರ ನಡೆಯಲಿದೆ. ಭಾರತೀಯ ರೈಲ್ವೆಯ ಸಂಶೋಧನೆ, ವಿನ್ಯಾಸ ಮತ್ತು ಮಾನಕ ಸಂಸ್ಥೆಯ (RDSO) ತಂಡವು ಶೀಘ್ರದಲ್ಲೇ ಆಗಮಿಸಿ ಈ ಪರೀಕ್ಷಾರ್ಥ ಸಂಚಾರದ ಉಸ್ತುವಾರಿ ವಹಿಸಲಿದೆ ಎಂದು ಮೈಸೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಮುದಿತ್ ಮಿತ್ತಲ್ ತಿಳಿಸಿದ್ದಾರೆ.
ಚೆನ್ನೈನ ಇಂಟೆಗ್ರಲ್ ಕೋಚ್ ಫ್ಯಾಕ್ಟರಿ (ICF) ಯಿಂದ AEB ತಂತ್ರಜ್ಞಾನ ಹೊಂದಿರುವ 20 ಕೋಚ್ಗಳ ವಂದೇ ಭಾರತ್ ರೇಕ್ ಸದ್ಯ ಮೈಸೂರು ವಿಭಾಗಕ್ಕೆ ತಲುಪಿದೆ. ರೈಲನ್ನು ಮಂಡ್ಯ ಜಿಲ್ಲೆಯ ಪಾಂಡವಪುರ ರೈಲು ನಿಲ್ದಾಣದಲ್ಲಿ ನಿಲ್ಲಿಸಲಾಗಿದೆ.

